ಬೆಂಗಳೂರು, ಜೂ 4 Daijiworld News/MSP): ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲನುಭವಿಸಲು ಹಿರಿಯರ ಮೂಲೆಗುಂಪು ಮಾಡಿದ್ದೆ ಕಾರಣ. ಇನ್ನು ಮುಂದೆ ಹಿರಿಯ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯುವುದು ಕಷ್ಟ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್ ತಪ್ಪುಗಳ ಬಗ್ಗೆ ಬರೆದುಕೊಂಡಿರುವ ರೆಡ್ಡಿ, ಲೋಕಸಭಾ ಚುನಾವಣೆ ಹೀನಾಯ ಸೋಲು ಅನುಭವಿಸಿಲು ಹಿರಿಯರು ನೀಡಿದ ಸಲಹೆಗಳನ್ನು ಪರಿಗಣಿಸದೇ ಇರುವುದು ಮತ್ತು ಕಾಂಗ್ರೆಸ್ ಸಚಿವರ ಸಂಘಟನಾ ದೂರದೃಷ್ಟಿತ್ವ ಕೊರತೆ , ಕೆಲವು ಸಚಿವರ ಕಾರ್ಯಕ್ಷಮತೆ ಪಕ್ಷ ಹಿನ್ನಡೆಯಾಗಲು ಪ್ರಮುಖ ಕಾರಣ ಎಂದು ಬರೆದುಕೊಂಡಿದ್ದಾರೆ.
ಇದಲ್ಲದೆ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದಲ್ಲಿ ಪಕ್ಷದ ಕುರಿತು ಏನೂ ಅರಿವಿಲ್ಲದೇ ಬಂದ ಹೊಸಬರಿಗೆ,ವಲಸಿಗರಿಗೆ ಮಣೆ ಹಾಕಿದ್ದೇ ಇಂದಿನ ಈ ಪರಿಸ್ಥಿತಿಗೆ ಕಾರಣ.ರಾಜ್ಯದ ಮುಂಚೂಣಿ ನಾಯಕರು ಹಾಗೂ ಉಸ್ತುವಾರಿಗಳು ಪಕ್ಷದ ಆಂತರಿಕ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಎಡವಿದ್ದಾರೆ. ನಮ್ಮ ಸರ್ಕಾರವಿದ್ದೂ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಉತ್ಸಾಹ ಕಳೆದುಕೊಂಡಿದ್ದರು. ಇದಕ್ಕೆ ಪ್ರಮುಖ ಸ್ಥಾನದಲ್ಲಿರುವ ಕೆಲವು ಕಾಂಗ್ರೆಸ್ ಸಚಿವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಯಾವುದೇ ಉತ್ತಮ ಭಾಂಧವ್ಯ, ಸಂವಹನ ಇಲ್ಲದಿರುವುದು, ಹಿರಿಯ ನಾಯಕರು ಹಾಗೂ ಕಾರ್ಯಕರ್ತರ ನಿರ್ಲಕ್ಷ ಕಾರಣವಾಗಿದೆ. ಈ ಕುರಿತು ಹಲವು ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಸವಾಲಿನ ದಿನಗಳನ್ನು ಎದುರಿಸಲು, ಪಕ್ಷ ಹಾಗೂ ಸರ್ಕಾರದಲ್ಲಿ ಹಿರಿಯರ ಕಡೆಗಣನೆ ಸರಿದೂಗಿಸಬೇಕಾಗಿದೆ. ಸರ್ಕಾರದಲ್ಲಿ ಹಿರಿಯರಿಗೆ ಪ್ರಾತಿನಿಧ್ಯ ನೀಡುವಂತಾಗಲು ಕಾಂಗ್ರೆಸ್ ಪಕ್ಷದ ಹಿರಿಯರೆಲ್ಲರೂ ಒಂದೆಡೆ ಸೇರಿ ಪಕ್ಷದ ಹಿತ ಸಮಾಲೋಚಿಸಬೇಕಾಗಿದೆ. ಜೊತೆಗೆ ಹಿರಿಯರು ಯಾರೂ ಪಕ್ಷ ಬಿಡದಂತೆ ಎಚ್ಚರಿಕೆವಹಿಸಬೇಕಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಹಿರಿಯ ನಾಯಕರು ಪಕ್ಷದಲ್ಲಿ ಮುಂದುವರೆಯುವುದು ಕಷ್ಟ ಸಾಧ್ಯವಾದೀತು.
ಪಕ್ಷದ ಪರ ಚುನಾವಣಾ ಫಲಿತಾಂಶದಲ್ಲಿ ಎಡವಿದ ಸಚಿವರಿಗೆ ಪಕ್ಷ ಸಂಘಟನಾ ಜವಾಬ್ದಾರಿ ನೀಡುವುದರ ಜೊತೆಗೆ ಹಿರಿಯರಿಗೆ ಸರ್ಕಾರದಲ್ಲಿ ಸ್ಥಾನಮಾನ ನೀಡಿ ಪಕ್ಷದ ಆಂತರಿಕ ಅಸಮತೋಲನವನ್ನು ಸರಿಪಡಿಸುವ ಕಾರ್ಯವನ್ನು, ಜವಾಬ್ದಾರಿ ಹೊತ್ತಿರುವ ಕಾಂಗ್ರೆಸ್ ನಾಯಕರು ಗಮನ ಹರಿಸಬೇಕಾಗಿದೆ ಎಂದು ಹೇಳಿದ್ದಾರೆ.