ಬೆಳಗಾವಿ, ನ.08(DaijiworldNews/AA): ಉಪಚುನಾವಣೆಯಲ್ಲಿ ನಾಟಕ ಮಾಡಲು ವಕ್ಫ್ ಬೋರ್ಡ್ ಆಸ್ತಿ ತನಿಖೆ ವಿಷಯದಲ್ಲಿ ಕೇಂದ್ರದ ಜೆಪಿಸಿ ಸಮಿತಿ ರಾಜ್ಯಕ್ಕೆ ಅನಧಿಕೃತವಾಗಿ ಬಂದಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಮೊದಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಯನ್ನು ದುರುಪಯೋಗ ಪಡೆಸಿಕೊಂಡರು. ಈಗ ಜೆಪಿಸಿ ಸಮಿತಿಯನ್ನು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ. ಹಾಗಾದರೆ ನಿಮ್ಮ ನೀತಿ ಏನು ಎಂಬುದಕ್ಕೆ ಪ್ರಧಾನಿ ಉತ್ತರಿಸಬೇಕು. ಜೆಪಿಸಿ ದುರುಪಯೋಗ ಪಡಿಸಿಕೊಳ್ಳುವ ಬದಲು ರಾಜ್ಯ ಸರಕಾರಕ್ಕೆ ಪತ್ರ ಬರೆದು ಮಾಹಿತಿ ಕೇಳಬಹದಿತ್ತು. ಜೆಪಿಸಿಯನ್ನು ಅನಧಿಕೃತವಾಗಿ ಬಳಕೆ ಮಾಡಿಕೊಂಡಿದ್ದು ದುರ್ದೈವದ ವಿಚಾರ ಎಂದು ತಿಳಿಸಿದರು.
ರಾಜ್ಯದಲ್ಲಿ ಶಿಗ್ಗಾವಿ, ಸಂಡೂರು, ಚನ್ನಪಟ್ಟಣದ ವಿಧಾನಸಭಾ ಮತಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿವೆ. ಮೂರು ಕ್ಷೇತ್ರದ ಕಾಂಗ್ರೆಸ್ ಅಲೆ ಕಾಣುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಮೂರೂ ಕ್ಷೇತ್ರಗಳಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಉಪ ಚುನಾವಣೆಯಲ್ಲಿ ಬಿಜೆಪಿಯವರು ವಕ್ಫ್ ಹೆಸರಿನಲ್ಲಿ ಸಾಕಷ್ಟು ಸುಳ್ಳು ಪ್ರಚಾರ ನಡೆಸಿದ್ದಾರೆ. ಧರ್ಮ-ಧರ್ಮಗಳ, ಜಾತಿ-ಜಾತಿ ಜಾತಿಗಳ ನಡುವೆ ದ್ವೇಷ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಚ್ ಕೆ ಪಾಟೀಲ ಕಿಡಿ ಕಾರಿದ್ದಾರೆ.