ಬೆಂಗಳೂರು, ನ.08(DaijiworldNews/AA): ಸಿಎಂ ಸಿದ್ದರಾಮಯ್ಯ ಅವರ ಕುಮ್ಮಕ್ಕಿನಿಂದ ಜಮೀರ್ ಅಹ್ಮದ್ ಅವರೇ ನೇತೃತ್ವ ವಹಿಸಿ ರೈತರ ಜಮೀನಿಗೆ ಕನ್ನ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಕಿಡಿ ಕಾರಿದ್ದಾರೆ.
ವಿಧಾನಸೌದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿಗಳ ಧೋರಣೆ, ನಡವಳಿಕೆಯನ್ನು ರಾಜ್ಯದ ರೈತರು- ಜನರು ಪ್ರಶ್ನೆ ಮಾಡುತ್ತಿದ್ದಾರೆ. ರಾಜ್ಯದ ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ 3 ಕ್ಷೇತ್ರಗಳಲ್ಲೂ ಬಿಜೆಪಿ- ಎನ್ಡಿಎ ಪಕ್ಷ ಗೆಲ್ಲಲಿದೆ ಎಂದು ತಿಳಿಸಿದರು.
3 ಕ್ಷೇತ್ರಗಳ ಉಪ ಚುನಾವಣೆ ನಡೆಯುತ್ತಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಗೆದ್ದಾಗಿದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಸಂಡೂರಿನಲ್ಲಿ ಮತ್ತು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನವರು ಗೆದ್ದೇ ಗೆಲ್ಲುವ ಭ್ರಮೆಯಲ್ಲಿದ್ದರು. ಆದರೆ ಈಗ ಮಾನ್ಯ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷಕ್ಕೆ ಮೇಲುಗೈ ಆಗುತ್ತಿರುವುದು ಅರಿವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ತಮ್ಮ ಕಾರ್ಯಕ್ರಮಗಳನ್ನು ರದ್ದು ಮಾಡಿ ಸಂಡೂರಿನಲ್ಲಿ ಬೀಡುಬಿಡುತ್ತಿದ್ದು, ಆ ಕ್ಷೇತ್ರವೂ ಕಾಂಗ್ರೆಸ್ ಕೈಜಾರಿ ಹೋಗುವ ವಾತಾವರಣ ಇದೆ. ಮುಖ್ಯಮಂತ್ರಿಗಳ ರೈತ ವಿರೋಧಿ ಧೋರಣೆ, ಮಠಮಾನ್ಯಗಳ ಜಮೀನನ್ನು ಕಸಿಯುವ ಹುನ್ನಾರದ ಹಿಂದೂ ವಿರೋಧಿ ನಡವಳಿಕೆಯು ಕಾಂಗ್ರೆಸ್ಸಿಗೆ ಶಾಪ ಆಗಲಿದೆ. ಜನರು ತಿರುಗಿ ಬೀಳಲಿದ್ದಾರೆ ಎಂದರು.