ಸಂಡೂರು,ನ.08(DaijiworldNews/AK):ವಿರೋಧ ಪಕ್ಷಗಳ ಜನ ನಾಯಕರನ್ನು CBI, ED, IT ಹೆಸರಲ್ಲಿ ಹೆದರಿಸಿ, ಬೆದರಿಸಿ ಮೋದಿ ದರ್ಬಾರು ನಡೆಸುತ್ತಿದ್ದಾರೆ. ಬಿಜೆಪಿಯ ಬೆದರಿಕೆ, ಷಡ್ಯಂತ್ರ, ಕುತಂತ್ರಗಳಿಗೆ ಈ ಉಪ ಚುನಾವಣೆಯಲ್ಲಿ ಪಾಠ ಕಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಸಂಡೂರು ವಿಧಾನಸಭಾ ಕ್ಷೇತ್ರದ ಕುಡುತಿನಿಯಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಮ್ಮ ಅವರ ಗೆಲುವಿನ ಪ್ರಚಾರ ಸಭೆಯಲ್ಲಿ ಮಾಡಿದ ಅವರು, ಪ್ರಧಾನಿಗಳಾದ ನರೇಂದ್ರ ಮೋದಿಯಾಗಲಿ, ಬಿಜೆಪಿಯವರಾಗಲೀ ಒಂದೇ ಒಂದು ದಿನ ನಮ್ಮ ಜನರ ದಿನನಿತ್ಯದ ಸಮಸ್ಯೆಗಳ ಬಗ್ಗೆ ಮಾತಾಡೋದಿಲ್ಲ, ಬೆಲೆ ಏರಿಕೆ ಬಗ್ಗೆ ಮಾತಾಡಲ್ಲ,ನಿರುದ್ಯೋಗ ಸಮಸ್ಯೆ ಬಗ್ಗೆ ಮಾತಾಡಿಲ್ಲ , ರೂಪಾಯಿ ಮೌಲ್ಯ ಕುಸಿಯುತ್ತಿರುವುದರ ಬಗ್ಗೆ ಮಾತಾಡಲ್ಲ, ರೈತ, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಾತಾಡಿಲ್ಲ ಎಂದು ಕಿಡಿಕಾರದರು.
ಕೇವಲ ಕೇಂದ್ರದ ತನಿಖಾ ಸಂಸ್ಥೆಗಳಾದ CBI, ED, IT ಉಪಯೋಗಿಸಿಕೊಂಡು ವಿರೋಧ ಪಕ್ಷದ ನಾಯಕರುಗಳನ್ನು ಹೆದರಿಸಿ, ಬೆದರಿಸಿಕೊಂಡು ತಮ್ಮ ಹುಳುಕುಗಳ ಬಗ್ಗೆ ಯಾರೂ ಮಾತಾಡದಂತೆ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದರು.ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಇವರ ಯೋಗ್ಯತೆಗೆ ಸರಿಯಾದ ರಸ್ತೆ ಮಾಡಲಿಲ್ಲ. ಹೊಸ ರಸ್ತೆಗಳು ಮಾಡುವುದಿರಲಿ ರಸ್ತೆ ಗುಂಡಿಗಳನ್ನೂ ಸಮರ್ಪಕವಾಗಿ ಮುಚ್ಚಲಿಲ್ಲ.ಅತ್ಯಂತ ಹಿಂದುಳಿದ ತಾಲ್ಲುಕು ಎನ್ನುವ ಪಟ್ಟಿಯಲ್ಲಿದ್ದ ಸಂಡೂರನ್ನು ಪ್ರಗತಿಯ ಪಥದಲ್ಲಿ ಧಾಪುಗಾಲು ಹಾಕುವಂತೆ ಮಾಡಿದ್ದು ಶಾಸಕರಾದ ಸಂತೋಷ್ ಲಾಡ್ ಮತ್ತು ಈ.ತುಕಾರಾಮ್.ಸಂಡೂರಿನ ಅಭಿವೃದ್ಧಿಯನ್ನು ತಲೆ ಮೇಲೆ ಹೊತ್ತುಕೊಂಡು ಹಗಲಿರುಳು ಕೆಲಸ ಮಾಡಿರುವ ಈ.ತುಕಾರಾಮ್ ಅವರ ಪತ್ನಿ ಅನ್ನಪೂರ್ಣಮ್ಮ ಗೆದ್ದರೆ ನಾನೇ ಗೆದ್ದಂತೆ ಎಂದು ಹೇಳಿದರು.