ಬೆಂಗಳೂರು,ನ.09(DaijiworldNews/AK): ಉಪ ಚುನಾವಣೆಯ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಸಂಡೂರು ಉಪಚುನಾವಣೆ ಪ್ರಚಾರಕ್ಕೆ ಹೊರಡುವ ಮುನ್ನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಂಡೂರಿನಲ್ಲಿ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ಸಿನವರು 500 ರೂ. ಕೊಟ್ಟು ಜನರನ್ನು ಕರೆಸುತ್ತಿದ್ದಾರೆ ಎಂದು ಆರೋಪಿಸಿದರು. ಇದು ಟಿ.ವಿಗಳಲ್ಲಿ ಬಿತ್ತರವಾದ ಕುರಿತು ಗಮನ ಸೆಳೆದರು.
2 ದಿನಗಳ ಕಾಲ ಸಿಎಂ ಸಂಡೂರು ಪ್ರವಾಸ ನಿಗದಿಯಾಗಿತ್ತು. ಮತ್ತೆ 3 ದಿನಗಳ ಕಾಲ ವಿಸ್ತರಿಸಿದ್ದಾರೆ. ಮುಖ್ಯಮಂತ್ರಿಗಳನ್ನು ನೋಡಬೇಕು; ಅವರ ಮಾತು ಕೇಳಬೇಕು; ಅಪರಾಧಿಗಳ ಮಾತು ಕೇಳಬೇಕೆಂಬ ಆಸಕ್ತಿಯೂ ಜನರಲ್ಲಿ ಹೊರಟುಹೋಗಿದೆ ಎಂದು ವಿಶ್ಲೇಷಿಸಿದರು. ಸಿಎಂ, ಹತಾಶರಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ಎಸಿಬಿ, ಲೋಕಾಯುಕ್ತ ವಿಚಾರದಲ್ಲಿ ಸಿದ್ದರಾಮಯ್ಯರಿಗೆ ಹೈಕೋರ್ಟ್ ಮಂಗಳಾರತಿ ಎತ್ತಿತ್ತು. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತ ಬಾಗಿಲು ಹಾಕಿ ಎಸಿಬಿ ರಚಿಸಿದಾಗ ಹೈಕೋರ್ಟ್ ಮಂಗಳಾರತಿ ಎತ್ತಿತ್ತು. ಇವೆಲ್ಲ ರಾಜ್ಯದ ಜನರಿಗೆ ಗೊತ್ತಿದೆ. ಇವರ ಗೊಡ್ಡು ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಯಡಿಯೂರಪ್ಪನವರು ದೂರ ಉಳಿದರೆ ಹೇಗಾದರೂ ಸಂಡೂರು ಗೆಲ್ಲಬಹುದು; ಹಾಗಾದರೆ ಚನ್ನಪಟ್ಟಣ, ಶಿಗ್ಗಾಂವಿ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಸಿಎಜಿ ವರದಿ ಆಧಾರದಲ್ಲಿ ಯಡಿಯೂರಪ್ಪನವರ ವಿರುದ್ಧ ಕೇಸುಗಳನ್ನು ದಾಖಲಿಸಿದ್ದನ್ನು ಜನರು ಮರೆತಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.