ನವದೆಹಲಿ, ನ.10(DaijiworldNews/TA):ಕೆನಡಾದ ಬ್ರಾಂಪ್ಟನ್ನಲ್ಲಿರುವ ಹಿಂದೂ ದೇವಾಲಯದ ಮೇಲೆ ಖಲಿಸ್ತಾನ್ ಪರ ಗುಂಪು ನಡೆಸಿದ ದಾಳಿಯನ್ನು ಖಂಡಿಸಿ ಹಿಂದೂ ಮತ್ತು ಸಿಖ್ ಕಾರ್ಯಕರ್ತರು ಭಾನುವಾರ ನವದೆಹಲಿಯಲ್ಲಿರುವ ಕೆನಡಾದ ಹೈಕಮಿಷನ್ ಹೊರಗೆ ಪ್ರತಿಭಟನೆ ನಡೆಸಿದರು.
ಹಲವಾರು ಹಿಂದೂ ಸಂಘಟನೆಗಳಿಂದ ಪ್ರತಿಭಟನೆಗೆ ಕರೆ ನೀಡಿದ ನಂತರ, ರಾಜತಾಂತ್ರಿಕ ಎನ್ಕ್ಲೇವ್ ಚಾಣಕ್ಯಪುರಿಯಲ್ಲಿರುವ ಕೆನಡಾದ ಹೈಕಮಿಷನ್ ಎದುರು ಭದ್ರತೆಯನ್ನು ಹೆಚ್ಚಿಸಲಾಯಿತು. ದೆಹಲಿ ಪೊಲೀಸರು ಅಪಾರ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಿದರು ಮತ್ತು ಕೆನಡಾದ ರಾಯಭಾರಿ ಕಚೇರಿಯ ಮುಂದೆ ಬ್ಯಾರಿಕೇಡ್ಗಳನ್ನು ಅಳವಡಿಸಲಾಯಿತು.
ಹೈಕಮಿಷನ್ಗೆ ತೆರಳುತ್ತಿದ್ದ ಹಲವಾರು ಹಿಂದೂ ಸಿಖ್ ಗ್ಲೋಬಲ್ ಫೋರಂ ಕಾರ್ಯಕರ್ತರು ಪೊಲೀಸ್ ಬ್ಯಾರಿಕೇಡ್ಗಳನ್ನು ಏರಿ ಕುಸಿಯಲು ಪ್ರಯತ್ನಿಸಿದರು. ‘ಹಿಂದೂಗಳು ಮತ್ತು ಸಿಖ್ಖರು ಒಗ್ಗಟ್ಟಾಗಿದ್ದಾರೆ’ ಮತ್ತು ‘ಕೆನಡಾದಲ್ಲಿ ದೇವಸ್ಥಾನಗಳನ್ನು ಅವಮಾನಿಸುವುದನ್ನು ಭಾರತೀಯರು ಸಹಿಸುವುದಿಲ್ಲ’ ಎಂಬ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಲಾಯಿತು.
ನವೆಂಬರ್ 4 ರಂದು ಕಾನ್ಸುಲರ್ ಕ್ಯಾಂಪ್ನಲ್ಲಿ ಕೆನಡಾದ ಬ್ರಾಂಪ್ಟನ್ನಲ್ಲಿರುವ ಹಿಂದೂ ಸಭಾ ಮಂದಿರದ ಹೊರಗೆ ಹಲವಾರು ಖಾಲಿಸ್ತಾನಿ ಬೆಂಬಲಿಗರು ಭಕ್ತರ ಮೇಲೆ ಹಲ್ಲೆ ನಡೆಸಿದ ನಂತರ ಪರಿಸ್ಥಿತಿ ಬಿಗಡಾಯಿಸಿತು. ಈ ಕಾರಣದಿಂದ ಪ್ರತಿಭಟನೆ ತೀವ್ರರೂಪಕ್ಕೆ ಹೋಗಿದೆ ಎನ್ನಲಾಗಿದೆ.
ಕಾನ್ಸುಲರ್ ಕ್ಯಾಂಪ್ ನಡೆಯುತ್ತಿದ್ದಾಗ ಕೆನಡಾದ ಬ್ರಾಂಪ್ಟನ್ನಲ್ಲಿರುವ ಹಿಂದೂ ಮಂದಿರದ ಹೊರಗೆ ಹಲವಾರು ಖಲಿಸ್ತಾನಿ ಬೆಂಬಲಿಗರು ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯು ಉದ್ದೇಶಪೂರ್ವಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಖಂಡಿಸಿದ್ದರು.