ಬೆಂಗಳೂರು, ಜೂ 04 (Daijiworld News/SM): ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜೂನ್ 21 ರಿಂದ ಗ್ರಾಮ ವಾಸ್ತವ್ಯ ಆರಂಭಿಸಲು ನಿರ್ಧರಿಸಿದ್ದು ಇದನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಖಂಡಿಸುತ್ತಿವೆ. ಪ್ರಮುಖವಾಗಿ ಬಿಜೆಪಿ ಮುಖಂಡರು ಸಿಎಂ ನಿರ್ಧಾರದ ಬಗ್ಗೆ ಲೇವಡಿ ಮಾಡುತ್ತಿದ್ದಾರೆ.
ಇದೀಗ ಪ್ರತಿಪಕ್ಷ ಬಿಜೆಪಿಯ ಎಲ್ಲಾ ಟೀಕೆಗಳಿಗೆ ಸಿಎಂ ಕುಮಾರಸ್ವಾಮಿ ಟ್ವಿಟರ್ ಮೂಲಕ ಉತ್ತರ ಕೊಟ್ಟಿದ್ದಾರೆ. 'ನನ್ನ ಗ್ರಾಮ ವಾಸ್ತವ್ಯದ ಬಗ್ಗೆ ಬಿಜೆಪಿ ನಾಯಕರ ಕುಹಕ, ವ್ಯಂಗ್ಯ ಮತ್ತು ಟೀಕೆಗಳನ್ನು ಗಮನಿಸಿದ್ದೇನೆ. ಗ್ರಾಮ ವಾಸ್ತವ್ಯ ಮಾಡಲು ಮಾನವೀಯ ಕಳಕಳಿ, ನೈಜ ಅಂತಃಕರಣ ಇರಬೇಕು. ಗ್ರಾಮ ವಾಸ್ತವ್ಯ ಘೋಷಣೆಗೆ ಜನರಿಂದ ದೊರೆತ ಸ್ಪಂದನೆಯೇ ಬಿಜೆಪಿ ನಾಯಕರಿಗೆ ಉತ್ತರ' ಎಂದು ಟ್ವೀಟ್ ಮಾಡಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಆರಂಭಿಸುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಜೂನ್ 21ರಂದು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲೂಕು, ಜೂನ್ 22ರಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ್ ಪೂಜಾರಿ ಸೇರಿದಂತೆ ಹಲವು ನಾಯಕರು ಟೀಕಿಸಿದ್ದರು.