ಕೋಲಾರ, ಜೂ04(Daijiworld News/SS): ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ನೀರಿನ ಸಮಸ್ಯೆಗೂ, ಎತ್ತಿನ ಹೊಳೆ ನೀರಿನ ಯೋಜನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನ ಹೊಳೆ ಯೋಜನೆಗೂ ಮಂಗಳೂರು ಹಾಗೂ ಧರ್ಮಸ್ಥಳದಲ್ಲಿ ಇರುವ ನೀರಿನ ಸಮಸ್ಯೆಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಕೆಲವರು ಬೇಕಾಗಿ ಇದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಎತ್ತಿನ ಹೊಳೆ ಯೋಜನೆ ವೇಗವಾಗಿ ಸಾಗುತ್ತಿದ್ದು, ಜೂ.12 ರಂದು ಬಯಲುಸೀಮೆಯ ಎಲ್ಲಾ ಶಾಸಕರು ಕಾಮಗಾರಿಯನ್ನು ಪರಿಶೀಲನೆ ಮಾಡಲಿದ್ದಾರೆ. ಆಕಾಶದಿಂದ ಬೀಳುವ ನೀರು ಪಶ್ಚಿಮಘಟ್ಟಗಳ ಮೂಲಕ ಅರಬ್ಬಿ ಸಮುದ್ರಕ್ಕೆ ಸೇರುತಿತ್ತು. 65 ವರ್ಷಗಳ ಇತಿಹಾಸದ ಅಂಕಿ ಅಂಶಗಳ ಪ್ರಕಾರ ಸಕಲೇಶಪುರದ ಕೆಂಪುಹೊಳೆ, ವಾಟೆ ಹೊಳೆ, ಹೊಸ ಹೊಳೆ ಸೇರಿದಂತೆ 7 ಹೊಳೆಗಳಿದ್ದು, ಇಲ್ಲಿ ಸುಮಾರು 400 ರಿಂದ 450 ಟಿಎಂಸಿ ನೀರು ಹರಿದು ಪ್ರತಿ ವರ್ಷ ಅರಬ್ಬಿ ಸಮುದ್ರ ಸೇರುತ್ತಿದೆ. ಇಲ್ಲಿ ಸಣ್ಣದಾದ ಗೋಡೆಯನ್ನು ನಿರ್ಮಿಸಿ 24 ಟಿಎಂಸಿ ನೀರನ್ನು ಬಯಲುಸೀಮೆ ಪ್ರದೇಶಗಳಿಗೆ ಹರಿಸುವುದೇ ಎತ್ತಿನಹೊಳೆ ಯೋಜನೆ ಉದ್ದೇಶ ಎಂದು ಹೇಳಿದರು.
ವಿರೋಧ ಮಾಡುವರು ನಮ್ಮ ವಿರೋಧಿಗಳಲ್ಲ. ಅವರೆಲ್ಲ ನಮ್ಮ ಅಣ್ಣ ತಮ್ಮಂದಿರು ಅವರಿಗೆ ನಮ್ಮ ಸಮಸ್ಯೆ ಕುರಿತು ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.