ದೆಹಲಿ, ನ.12(DaijiworldNews/AA): ದೇಶಕ್ಕೆ ಎದುರಾಗುವ ಸಮಕಾಲೀನ ಬೆದರಿಕೆಗಳನ್ನು ನಿಭಾಯಿಸಲು ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇಂದು ದೆಹಲಿ ರಕ್ಷಣಾ ಮಾತುಕತೆ- 2024ರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶೀಯ ರಕ್ಷಣಾ ಸಾಮರ್ಥ್ಯಕ್ಕೆ ಒತ್ತು ನೀಡಿ, ಬಾಹ್ಯ ಬೆದರಿಕೆಗಳ ವಿರುದ್ಧವೂ ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತ ಮಾತ್ರವಲ್ಲದೆ, ಅನೇಕ ದೇಶಗಳು ವಿವಿಧ ರೂಪದ ಭದ್ರತಾ ಸವಾಲುಗಳನ್ನು ಎದುರಿಸುತ್ತಿವೆ. ಈ ಹಿಂದೆ ಗಡಿ ಸಂಬಂಧಿತ ಬೆದರಿಕೆಗಳು ಪ್ರಮುಖವಾಗಿದ್ದವು. ಆದರೆ ಈಗ ಭಯೋತ್ಪಾದನೆ, ಸೈಬರ್ ದಾಳಿಗಳು ಮತ್ತು ಹೈಬ್ರಿಡ್ ಯುದ್ಧ ವಿಷಯಗಳು ಸಹ ಪ್ರಮುಖವಾಗುತ್ತಿವೆ. ಇವನ್ನು ಎದುರಿಸಲು ಆಧುನಿಕ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ರಕ್ಷಣಾ ಆಧುನೀಕರಣ ಮತ್ತು ಉತ್ಪಾದನೆಗೆ ಅನೇಕ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರಕ್ಷಣಾ ವಲಯದಲ್ಲಿ ಸ್ವಾವಲಂಬನೆಗೆ ಒತ್ತು ನೀಡಿ, ಆತ್ಮನಿರ್ಭರ ಭಾರತ ಅಭಿಯಾನ ಆರಂಭಗೊಂಡಿದೆ. ರಕ್ಷಣಾ ಖರೀದಿ ನಿಯಮಾವಳಿ -2020, ದೇಶೀಯ ಖರೀದಿಗೆ ಒತ್ತು ನೀಡಿದ್ದು, ದೇಶೀಯವಾಗಿ ವಿನ್ಯಾಸಗೊಳಿಸಿದ, ಅಭಿವೃದ್ಧಿಪಡಿಸಿದ ಮತ್ತು ತಯಾರಿಕೆಯಾದ ಉತ್ಪನ್ನಗಳನ್ನು ಉತ್ತೇಜಿಸುತ್ತಿದೆ. ವಿದೇಶಿ ಪೂರೈಕೆದಾರರ ಅವಲಂಬನೆ ಕಡಿಮೆ ಮಾಡುವ ನಿಟ್ಟಿನಲ್ಲಿ, ದೇಶೀಯ ಸಾಮರ್ಥ್ಯಗಳನ್ನು ಹೆಚ್ಚಿಸಲು ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ, ಮೇಕ್ ಇನ್ ಇಂಡಿಯಾ ಪ್ರಸ್ತಾವನೆಯ ಕಾರ್ಯ ಚೌಕಟ್ಟಿನಡಿ, ವಿದೇಶಿ ಹೂಡಿಕೆ, ಸಹಭಾಗಿತ್ವ, ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಸಹ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ತೇಜಸ್ ಹಗುರ ಯುದ್ಧ ವಿಮಾನ, ಐಎನ್ಎಸ್ ವಿಕ್ರಾಂತ್ ಮತ್ತು ಡಿಆರ್ಡಿಒನ ಕ್ಷಿಪಣಿ ಕಾರ್ಯಕ್ರಮಗಳಂತಹ ದೇಶೀಯ ಯೋಜನೆಗಳಲ್ಲಿ ಮೇಕ್ ಇನ್ ಇಂಡಿಯಾ ಅಭಿಯಾನ ಯಶಸ್ವಿಯಾಗಿರುವುದನ್ನು ಕಾಣಬಹುದಾಗಿದೆ. ಭಾರತದಿಂದ ರಕ್ಷಣಾ ರಫ್ತು ಅಧಿಕಗೊಳ್ಳುತ್ತಿದೆ. ರಕ್ಷಣಾ ಉದ್ಯಮದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಸರ್ಕಾರ, ನಿರ್ದಿಷ್ಟ ಪ್ರಕರಣಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿಯನ್ನು ಶೇಕಡ 100ಕ್ಕೆ ಹೆಚ್ಚಿಸಿದೆ ಎಂದು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ದೇಶ ರಕ್ಷಣಾ ಉತ್ಪನ್ನಗಳಲ್ಲಿ ಸ್ವಾವಲಂಬನೆ ಸಾಧಿಸಿ, ಈಗಾಗಲೇ 100ಕ್ಕೂ ಅಧಿಕ ರಾಷ್ಟ್ರಗಳಿಗೆ ಸಾಧನಗಳನ್ನು ರಫ್ತು ಮಾಡುತ್ತಿದೆ. 2030ರ ವೇಳೆಗೆ ರಕ್ಷಣಾ ರಫ್ತು ವಹಿವಾಟನ್ನು 50 ಸಾವಿರ ಕೋಟಿ ರೂಪಾಯಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.