ಶಿಗ್ಗಾಂವಿ, ನ.12(DaijiworldNews/AA): ವಕ್ಫ್ ಆಸ್ತಿ ಯಾರೊಬ್ಬರ ಸ್ವತ್ತು ಆಗಬಾರದು. ವಕ್ಫ್ ಆಸ್ತಿ ರಕ್ಷಣೆಗೆ ಬಿಜೆಪಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 2 ಲಕ್ಷ 30 ಸಾವಿರ ಕೋಟಿ ರೂಪಾಯಿ ಮೊತ್ತದ ಆಸ್ತಿ ವಕ್ಫ್ ಬಳಿ ಇದೆ. ಇದನ್ನು ಕಾಂಗ್ರೆಸ್ ನಾಯಕರು ಕಬಳಿಸುವ ಹುನ್ನಾರ ನಡೆಸಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ. ವಕ್ಫ್ ಮಂಡಳಿಗೆ ಬಂದಿರುವ ದಾನದ ಆಸ್ತಿಯನ್ನು ಅನ್ಯರ ಪಾಲಾಗದಂತೆ ರಕ್ಷಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಪ್ರತಿಯೊಂದು ವಿಷಯಕ್ಕೂ ಉಡಾಫೆ ಉತ್ತರ ನೀಡುವುದನ್ನು ಬಿಟ್ಟು ಮುಡಾ ಸೇರಿದಂತೆ ಇನ್ನಿತರ ಹಗರಣದ ಆರೋಪದ ಹಿನ್ನೆಲೆಯಲ್ಲಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಡಾ ನಿವೇಶನ ಹಂಚಿಕೆಯಲ್ಲಿ ತಮ್ಮ ಪಾತ್ರ ಇಲ್ಲ ಎಂದು ಹೇಳುತ್ತಲೇ ನಿವೇಶನಗಳನ್ನು ವಾಪಸ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.