ರಾಂಚಿ, ನ.12(DaijiworldNews/AK): ನಾಳೆ ಜಾರ್ಖಂಡ್ ವಿಧಾನಸಭೆಗೆ ಮೊದಲ ಹಂತದ ಮತದಾನ ನಡೆಯಲಿದೆ. ಮೊದಲ ಸುತ್ತಿನಲ್ಲಿ 15 ಜಿಲ್ಲೆಗಳ 43 ಸ್ಥಾನಗಳಿಗೆ ಮತದಾನ ನಡೆಯಲಿದೆ.ಮೊದಲ ಹಂತದಲ್ಲಿ 683 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
ಮೊದಲ ಹಂತದಲ್ಲಿ ಒಟ್ಟು 43 ಸ್ಥಾನಗಳ ಪೈಕಿ ಜೆಎಂಎಂ 23 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 17 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಒಟ್ಟು ಐದು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎನ್ಡಿಎಯಲ್ಲಿ ಬಿಜೆಪಿ 43ರಲ್ಲಿ 36 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸುದೇಶ್ ಮಹತೋ ಅವರ ಎಜೆಎಸ್ಯು ನಾಲ್ಕು ಸ್ಥಾನಗಳಲ್ಲಿ, ನಿತೀಶ್ ಕುಮಾರ್ ಅವರ ಜೆಡಿಯು ಎರಡು ಸ್ಥಾನಗಳಲ್ಲಿ ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್ಜೆಪಿ (ಆರ್) ಒಂದು ಸ್ಥಾನದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್, ಆರೋಗ್ಯ ಸಚಿವ ಬನ್ನಾ ಗುಪ್ತಾ, ರಾಜ್ಯಸಭಾ ಸಂಸದ ಮಹುವಾ ಮಜಿ, ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಪತ್ನಿ ಗೀತಾ ಕೋಡಾ ಮತ್ತು ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಅವರ ಸೊಸೆ ಪೂರ್ಣಿಮಾ ದಾಸ್ ಅವರಂತಹ ಪ್ರಮುಖ ನಾಯಕರು ಮೊದಲ ಹಂತದ ಚುನಾವಣಾ ಅಖಾಡದಲ್ಲಿ ಗಮನ ಸೆಳೆದಿವೆ.
ರಾಜ್ಯಾದ್ಯಂತ ಒಟ್ಟು 15,344 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 225 ಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಿಸಿದೆ. ಭದ್ರತಾ ಸುವ್ಯವಸ್ಥೆ ಕಾಪಾಡಲು ಮತ್ತು ಚುನಾವಣಾ ಪ್ರಕ್ರಿಯೆಯನ್ನು ಸುಗಮಗೊಳಿಸಲು 200 ಕಂಪನಿಗಳ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಮೊದಲ ಹಂತದಲ್ಲಿ 1.37 ಕೋಟಿ ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ.