ಕೆರೆಹಾಡಿ (ಹೆಚ್.ಡಿ.ಕೋಟೆ), ನ.12(DaijiworldNews/AK): ಆದಿವಾಸಿ/ಅರಣ್ಯವಾಸಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಾಗಿ ಸದ್ಯದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವನ್ಯ ಜೀವಿ ಮಂಡಳಿ ಸಭೆ ಕರೆದು ಅರಣ್ಯಾಧಿಕಾರಿಗಳಿಂದ ಅರಣ್ಯವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಕೆರೆಹಾಡಿಗೆ ಭೇಟಿ ನೀಡಿ ಅರಣ್ಯವಾಸಿಗಳ ಬಾಯಿಂದಲೇ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿದ್ದ ಅಧಿಕಾರಿಗಳಿಂದಲೂ ಮಾಹಿತಿ ಪಡೆದು ಕೆಲವು ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸೂಚಿಸಿ, ಸಂಕೀರ್ಣವಾಗಿದ್ದ ಸಮಸ್ಯೆಗಳ ಕುರಿತಾಗಿ ವನ್ಯ ಜೀವಿ ಮಂಡಳಿಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ತಕ್ಷಣ ಕರೆಂಟು-ನೀರು ಒದಗಿಸಿ
ಹಲವು ದಶಕಗಳಿಂದ ಕೆರೆಹಾಡಿ ಸೇರಿದಂತೆ ಒಂಬತ್ತು ಹಾಡಿಗಳಿಗೆ ಕರೆಂಟಿಲ್ಲ, ಕುಡಿಯುವ ನೀರಿಗೆ ಸಮಸ್ಯೆ ಇದೆ ಎನ್ನುವ ಆದಿವಾಸಿಗಳ ಮಾತು ಕೇಳಿ ಗರಂ ಆದ ಸಿಎಂ, ಯಾವ ಅರಣ್ಯ ಕಾಯ್ದೆ ಕೂಡ ಅರಣ್ಯವಾಸಿಗಳಿಗೆ ಕರೆಂಟು, ನೀರು ಕೊಡಬೇಡಿ ಎಂದು ಹೇಳುವುದಿಲ್ಲ. ಅರಣ್ಯಾಧಿಕಾರಗಳು ಅನಗತ್ಯ ಕಿರುಕುಳ ತೊಂದರೆ ಕೊಡಬೇಡಿ ಎಂದು ಸ್ಪಷ್ಟ ಸೂಚನೆ ನೀಡಿದರು.
ಒಂದು ತಿಂಗಳಲ್ಲಿ ಕರೆಂಟು ನೀರು
ಆದಿವಾಸಿ ಗಣೇಶ, ರಮೇಶ ಎನ್ನುವವರ ಹಟ್ಟಿಯಲ್ಲೇ ನೆಲದ ಮೇಲೆ ಕುಳಿತು ಆದಿವಾಸಿಗಳ ಸಮ್ಮುಖದಲ್ಲೇ ಮುಖ್ಯಮಂತ್ರಿಗಳು ಸಮಸ್ಯೆ ಆಲಿಸಿ, ಅರಣ್ಯಾಧಿಕಾರಿಗಳು ಮತ್ತು ಸಂಬಂಧಪಟ್ಟ ಇತರೆ ಇಲಾಖೆಗಳ ಮುಖ್ಯಸ್ಥರ ಜೊತೆ ಚರ್ಚಿಸಿದರು. ಕೊನೆಗೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿಯವರು, "ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಒಂದು ತಿಂಗಳಲ್ಲಿ ಕೆರೆಹಾಡಿ ಮತ್ತು ಇತರೆ ಎಂಟು ಹಾಡಿಗಳ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕದ ಸಮಸ್ಯೆ ಬಗೆಹರಿಸುತ್ತೇನೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು.
ವನ್ಯಜೀವಿ ಮಂಡಳಿ ಸಭೆ ಕರೆದು ಕೂಲಂಕುಷ ಚರ್ಚಿಸಿ ಸೂಕ್ತ ತೀರ್ಮಾನ
ಹಕ್ಕುಪತ್ರ ಇದ್ದರೂ ಅರಣ್ಯಾಧಿಕಾರಿಗಳು ಮನೆ ಕಟ್ಟಲು ಬಿಡುತ್ತಿಲ್ಲ, ಎರಡು-ಮೂರು ಎಕರೆ ಜಾಗದಲ್ಲಿ ಹಲವಾರು ದಶಕಗಳಿಂದ ಉಳುಮೆ ಮಾಡುತ್ತಿದ್ದರೂ ಕೇವಲ 2,3 ಗುಂಟೆಗೆ ಹಕ್ಕು ಪತ್ರ ನೀಡಿದ್ದಾರೆ. ನಮ್ಮ ಜಮೀನಿನಲ್ಲಿ ಟ್ರಾಕ್ಟರ್ ಬಳಸಲು ಅವಕಾಶ ನೀಡುತ್ತಿಲ್ಲ ಎನ್ನುವುದೂ ಸೇರಿದಂತೆ ಸಾಲು ಸಾಲು ಸಮಸ್ಯೆಗಳನ್ನು ಹೇಳಿಕೊಂಡ ಆದಿವಾಸಿ ವೆಂಕಟೇಶ್, ನರಸಿಂಹ, ಭಾಗ್ಯಮ್ಮ ಮುಂತಾದವರ ಮಾತು ಕೇಳಿದ ಸಿಎಂ, ಈ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟನೆ ನೀಡಿದರು.