ಬೆಂಗಳೂರು, ನ.13(DaijiworldNews/AK): ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಹೈಕೋರ್ಟ್ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಸತೀಶ್ ಸೈಲ್ ಹಾಗೂ ಇತರೆ ಆರೋಪಿಗಳಿಗೆ ವಿಧಿಸಿರುವ ಶಿಕ್ಷೆಯನ್ನು ಹೈಕೋರ್ಟ್ ಅಮಾನತ್ತಿನಲ್ಲಿಟ್ಟು ಆದೇಶ ಪ್ರಕಟಿಸಿದೆ.
ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ದಂಡದ ಮೊತ್ತದಲ್ಲಿ 25% ರಷ್ಟು ಕೋರ್ಟ್ ನಲ್ಲಿ ಠೇವಣಿ ಇಡುವಂತೆ ಷರತ್ತು ವಿಧಿಸಿದೆ. ದಂಡದ ಮೊತ್ತವನ್ನು 6 ವಾರದಲ್ಲಿ ಠೇವಣಿ ಇಡುವಂತೆ ಅಪರಾಧಿಗಳಿಗೆ ಸೂಚಿಸಿದೆ.
ಜನಪ್ರತಿನಿಧಿಗಳ ಕೋರ್ಟ್ ನೀಡಿದ ಆದೇಶವನ್ನು ರದ್ದು ಪಡಿಸುವಂತೆ ಸತೀಶ್ ಸೈಲ್, ಉದ್ಯಮಿಗಳಾದ ಸ್ವಸ್ತಿಕ್ ನಾಗರಾಜ್, ಕೆವಿಎನ್ ಗೋವಿಂದರಾಜ್ ಮತ್ತು ಚೇತನ್ ಶಾ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಶಿಕ್ಷೆಯನ್ನು ಅಮಾನತಿನಲ್ಲಿಟ್ಟ ಹಿನ್ನೆಲೆಯಲ್ಲಿ ಗುರುವಾರ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. 6 ಪ್ರಕರಣದಲ್ಲಿ ದೋಷಿಯಾಗಿದ್ದ ಸತೀಶ್ ಸೈಲ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಮತ್ತು 44 ಕೋಟಿ ರೂ. ದಂಡ ವಿಧಿಸಿತ್ತು.