ಶ್ರೀನಗರ, ಜೂ04(Daijiworld News/SS): 2019ರ ಮೊದಲ ಐದು ತಿಂಗಳಲ್ಲಿ 100ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಉಗ್ರ ಸಂಘಟನೆಗಳಿಗೆ ಸೇರುತ್ತಿರುವ ಯುವಕರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಈ ವರ್ಷ ಮಾರ್ಚ್ ತಿಂಗಳ ನಂತರ ಸುಮಾರು 50 ಯುವಕರು ಉಗ್ರರ ತಂಡ ಸೇರಿದ್ದಾರೆ. ಈ ಪ್ರವೃತ್ತಿ ತಡೆಯಲು ಭದ್ರತಾ ಪಡೆಗಳು ಪರ್ಯಾಯ ಮಾರ್ಗ ಅರಸುತ್ತಿವೆ. ಉಗ್ರರ ಪಡೆ ಸೇರುವ ಯುವಜನರ ಕುಟುಂಬಗಳಲ್ಲಿ ಅರಿವು ಮೂಡಿಸುವುದು ಇದರಲ್ಲಿ ಸೇರಿದೆ.
2019ರಲ್ಲಿ ಮೇ 31ರವರೆಗೆ 101 ಉಗ್ರರು ಹತರಾಗಿದ್ದು ಅವರಲ್ಲಿ 78 ಉಗ್ರರು ಭಾರತದವರು. ಅಲ್ ಕೈದಾ ಸಂಘಟನೆಯ ಘಟಕವಾಧ ಅನ್ಸರ್ ಘಾಜ್ವಾತ್ ಉಲ್ ಹಿಂದ್ನ ಮುಖ್ಯಸ್ಥ ಜಾಕಿರ್ ಮೂಸಾ ಕೂಡ ಹತರಲ್ಲಿ ಸೇರಿದ್ದಾನೆ.
ಈ ಮಧ್ಯೆ ಉಗ್ರರ ಒಳನುಸುಳುವಿಕೆ ಪ್ರಕರಣಗಳು ಹೆಚ್ಚುತ್ತಿವೆ. ಕೆಲವು ಉಗ್ರರು ಕಾಶ್ಮೀರ ವಲಯದ ಪೂಂಛ್ ಮತ್ತು ರಾಜೌರಿ ಜಿಲ್ಲೆ ಭಾಗದಿಂದ ಹಾಗೂ ಕಾಶ್ಮೀರ ಕಣಿವೆಯಲ್ಲಿನ ಗಡಿ ನಿಯಂತ್ರಣ ರೇಖೆಯ ಭಾಗದಿಂದ ಒಳನುಸುಳುತ್ತಿದ್ದಾರೆ. ಅಮರನಾಥ ಯಾತ್ರೆ ಈ ಮಾಸಾಂತ್ಯದಲ್ಲಿ ಆರಂಭವಾಗಲಿದೆ. ಹಾಗಾಗಿ, ಭದ್ರತೆಯನ್ನು ಹೆಚ್ಚಿಸಲಾಗಿದೆ.