ನವದೆಹಲಿ, ನ.14(DaijiworldNews/AA): ಬಾಂಬ್ ಬೆದರಿಕೆಯ ಕರೆ ಬಂದ ಹಿನ್ನೆಲೆಯಲ್ಲಿ ನಾಗ್ಪುರದಿಂದ ಕೋಲ್ಕತ್ತಾಗೆ ಹೊರಟಿದ್ದ ವಿಮಾನವನ್ನು ರಾಯ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.
ಸಿಐಎಸ್ಎಫ್ ಮತ್ತು ಪೊಲೀಸರು ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದು, ವಿಮಾನವನ್ನು ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ಯಾವುದೇ ಸ್ಫೋಟಕ ಪತ್ತೆಯಾಗದ ಕಾರಣ ಹುಸಿ ಬಾಂಬ್ ಬೆದರಿಕೆ ಎಂದು ತೀರ್ಮಾನಿಸಲಾಗಿದೆ.
ವಿಮಾನಯಾನ ಸಂಸ್ಥೆಗಳಿಗೆ ಬೆದರಿಕೆ ಬಂದ ಹಿನ್ನೆಲೆ ನಾಗ್ಪುರದಿಂದ ಕೋಲ್ಕತ್ತಾ ಕಡೆಗೆ ವಿಮಾನವನ್ನು ತಿರುಗಿಸಲಾಯಿತು. ಇಂಡಿಗೋ ವಿಮಾನದಲ್ಲಿದ್ದ 187 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು ಎಂದು ರಾಯ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇನ್ನು ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ಒಬ್ಬ ಪ್ರಯಾಣಿಕನನ್ನು ಬಂಧಿಸಲಾಗಿದ್ದು, ಆತನನ್ನು ನಿಮೇಶ್ ಮಂಡಲ್ ಎಂದು ಗುರುತಿಸಲಾಗಿದೆ. ಆತನನ್ನು ಮನ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ವಿಮಾನಯಾನ ಸಂಸ್ಥೆಗಳಿಂದ ದೂರು ದಾಖಲಾದ ಹಿನ್ನೆಲೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.