ಬೆಂಗಳೂರು, ನ.15(DaijiworldNews/AA): ಕರ್ನಾಟಕದಲ್ಲಿ 6 ಲಕ್ಷ ಎಕರೆಯನ್ನು ವಕ್ಫ್ ಆಸ್ತಿ ಮಾಡಲು ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಕ್ಫ್ ದೊಡ್ಡ ಅನ್ಯಾಯ. ರೈತರು, ಮಠಗಳು ಸೇರಿ ಎಲ್ಲರಿಗೂ ಇದರಿಂದ ಸಮಸ್ಯೆಯಾಗಿದೆ. ವಕ್ಫ್ ಟ್ರಿಬ್ಯುನಲ್ ರದ್ದಾಗಬೇಕು. ವಕ್ಫ್ ಟ್ರಿಬ್ಯುನಲ್ ಒಂದು ಶಾಪ ಆಗಿದೆ. ಹೀಗಾಗಿ, ನ್ಯಾಯಾಲಯದ ಮೂಲಕವೇ ಎಲ್ಲವೂ ಇತ್ಯರ್ಥವಾಗಬೇಕು. ಈಗ 2,700 ಎಕರೆ ಜಾಗ ಖಬರ್ ಸ್ತಾನಗೆ ಕೊಡೋಕೆ ಸರ್ಕಾರ, ಕಂದಾಯ ಇಲಾಖೆ ನಿರ್ಣಯ ಮಾಡಿದೆ. ವಕ್ಫ್ಗೆ ಎಷ್ಟು ಜಾಗ ತಗೋಬೋದು ಅಂತಾ ಅವರು ಲೀಸ್ಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡುಗೆ ಅವರು ಧಮ್ಕಿ ಹಾಕುತ್ತಿದ್ದಾರೆ. ನಾವು ಅಭಿಯಾನ ಮಾಡಿ ಮಾಹಿತಿ ಪಡೆದು ಜೆಪಿಸಿಗೆ ವರದಿ ಕೊಡ್ತೀವಿ. ಜನಜಾಗೃತಿಗಾಗಿ ಈ ಅಭಿಯಾನ ಮಾಡ್ತಿದ್ದೇವೆ. ರಾಜ್ಯ, ಕೇಂದ್ರ ಸರ್ಕಾರ ಎರಡಕ್ಕೂ ನಾವು ಈ ಒತ್ತಾಯ ಮಾಡ್ತಿದ್ದೇವೆ. ಜಮೀರ್ ಬಂದು ಭಾಷಣ ಮಾಡ್ತಾರೆ. ಸೌತಾನ್ ಅಂತ ಮಾತಾಡಿ ಪ್ರಚೋದನೆ ಮಾಡ್ತಾರೆ. ಅಧಿಕಾರಿಗಳಿಗೆ ಧಮ್ಕಿ ಹಾಕಿ ನೋಟಿಸ್ ಕೊಡಿ ಜಮೀರ್ ಹೇಳ್ತಿದ್ದಾರೆ. ಅಧಿಕಾರಿಗಳು ಭಯ ಬಿದ್ದಿದ್ದಾರೆ. ಹೀಗಾಗಿ, ಕೇಂದ್ರ ಸರ್ಕಾರದ ನಿರ್ಧಾರ ಆಗೋವರೆಗೂ ನೀವು ಯಾವುದೇ ದಾಖಲಾತಿ ಮಾಡಬೇಡಿ ಅಂತಾ ಅಧಿಕಾರಿಗಳಿಗೆ ಸೂಚನೆ ಕೊಟ್ಡಿದ್ದೇವೆ ಎಂದರು.
ವಕ್ಫ್ ಟ್ರಿಬ್ಯುನಲ್ ರದ್ದು ಆಗಬೇಕು ಅನ್ನೋದು ನಮ್ಮ ಮೊದಲ ಬೇಡಿಕೆ. ಇದು ಆಗಲೇಬೇಕು. ಹೀಗಾಗಿ, ಜನ ಜಾಗೃತಿ ಅಭಿಯಾನ ಮಾಡ್ತಿದ್ದೇವೆ. ನೋಟಿಸ್ ಕೊಟ್ಟು ಕೆಲವು ಈಗ ವಾಪಸ್ ಪಡೆದಿದ್ದಾರೆ. ಆದರೆ, ಅನೇಕ ಕಡೆ ನೋಟಿಸ್ ಕೊಡದೇ ದಾಖಲಾತಿ ವಕ್ಫ್ ಮಾಡಿದ್ದಾರೆ. ಬಿಜೆಪಿ ಪಕ್ಷದಿಂದಲೇ ಇದರ ವಿರುದ್ಧ ಹೋರಾಟ ಎಂದು ತಿಳಿಸಿದ್ದಾರೆ.