ಮೈಸೂರು, ನ.15(DaijiworldNews/AK): ಜಮೀರ್ ಅವರನ್ನು ನಾನು ಯಾವತ್ತೂ ಕುಳ್ಳ ಎಂದು ಕರೆದಿಲ್ಲ. ನಮ್ಮ ಸ್ನೇಹ ರಾಜಕೀಯವಾಗಿ ಅಷ್ಟೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿ ತಾಯಿ ಮುಂದೆ ನಿಂತು ಹೇಳ್ತಿದ್ದೇನೆ ಕೇಳಿ. ಬಸವರಾಜ್ ಹೊರಟ್ಟಿ ಅವತ್ತು ನನ್ನ ಕುಮಾರ ಎಂದಾಗ ಅವರನ್ನು ಹೊಡೆಯಲು ಹೋದ ಗಿರಾಕಿ ಜಮೀರ್. ಹೊರಟ್ಟಿ ಅವರನ್ನೇ ಕೇಳಿ ಬೇಕಾದರೆ. ಅವತ್ತು ಅವರನ್ನು ಹೊಡೆಯಲು ಇವರು ಹೋಗಿರಲಿಲ್ವಾ ಅಂತಾ ಎಂದು ಹೇಳಿದರು.
ಕರಿಯಾ, ಕುಳ್ಳ ಎಂದು ಮಾತಾಡಿಸಿ ಕೊಳ್ಳುವ ಸಂಸ್ಕೃತಿಯಿಂದ ಬಂದವ ನಾನಲ್ಲ. ಅವರ ಮಾತುಗಳು ಅವರ ಸಂಸ್ಕೃತಿ ತೋರಿಸುತ್ತದೆ. ಸಿಎಂ ಹಾಗೂ ಡಿಸಿಎಂ ಈ ಮಾತುಗಳನ್ನ ಸಮರ್ಥಿಸಿಕೊಂಡಿದ್ದಾರೆ. ಇದು ನಾಗರಿಕ ಸರ್ಕಾರನಾ? ಇಂಥ ಮಾತು ಹೇಳಿದವರು ಮೇಲೆ ಎಷ್ಟು ಕೇಸ್ ಹಾಕಿ ಜೈಲಿಗೆ ಹಾಕಿಲ್ಲ ಈ ಸರ್ಕಾರ? ಈಗ ಯಾಕೆ ಸುಮ್ಮನೆ ಇದೆ? ಸಿಎಂಗೆ ದೇವೇಗೌಡರು ಗರ್ವಭಂಗ ಮಾಡ್ತೀನಿ, ಸೊಕ್ಕು ಮುರಿತೀನಿ ಅನ್ನೋದು ಮಾನನಷ್ಟ ಹೇಳಿಕೆನಾ? . ದುಡ್ಡಿನ ಮದದಿಂದ ಈ ರೀತಿ ಮಾತಾಡುತ್ತಿದ್ದಾರೆ ಎಂದು ಜಮೀರ್ ವಿರುದ್ಧ ಕಿಡಿಕಾರಿದರು.
ಚನ್ನಪಟ್ಟಣದಲ್ಲಿ ಜನತೆಯ ಆಶೀರ್ವಾದ ಆಗಿದೆ. ನಾವು ಚನ್ನಪಟ್ಟಣದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.