ಬೆಂಗಳೂರು, ನ.15(DaijiworldNews/AK): ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಬುಡಕಟ್ಟು ಜನಾಂಗಕ್ಕೆ ಸೇರಿದ ಗೌರವಾನ್ವಿತ ದ್ರೌಪದಿ ಮುರ್ಮು ಅವರನ್ನು ದೇಶದ ರಾಷ್ಟ್ರಪತಿಯನ್ನಾಗಿ ಮಾಡಿದ್ದಾರೆ. ಅಲ್ಲದೆ, ಬುಡಕಟ್ಟು ಜನಾಂಗಕ್ಕೆ ಶಕ್ತಿ ಕೊಡುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿರ್ಸಾ ಮುಂಡಾ ಅವರು ರಾಂಚಿಯಲ್ಲಿ ಜನಿಸಿದ್ದು, ಬ್ರಿಟಿಷರ ವಿರುದ್ಧ ನಿರಂತರ ಹೋರಾಟ ಮಾಡಿ ಕೀರ್ತಿ ಪಡೆದವರು. ಅವರು ಬದುಕಿದ್ದು ಕೇವಲ 25 ವರ್ಷಗಳು ಮಾತ್ರ. ಬುಡಕಟ್ಟು ಜನಾಂಗದ ನಾಯಕರಾದ ಅವರು ಯುವಕರಾಗಿದ್ದಾಗಲೇ ಬ್ರಿಟಿಷರ ವಿರುದ್ಧ ತೊಡೆ ತಟ್ಟುವ ಕೆಲಸ ಮಾಡಿದ್ದರು ಎಂದು ತಿಳಿಸಿದರು
.
ಅವರ ಜನ್ಮ ದಿನವನ್ನು ದೇಶಾದ್ಯಂತ ಇವತ್ತು ಆಚರಿಸಲಾಗುತ್ತಿದೆ. ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಜೀ ಅವರು ಎಂದು ವಿವರಿಸಿದರು. ಬುಡಕಟ್ಟು ಜನಾಂಗದ ನಾಯಕನನ್ನು ಇಡೀ ದೇಶ ಸ್ಮರಿಸಬೇಕೆಂಬ ಸದುದ್ದೇಶದಿಂದ ದೇಶಾದ್ಯಂತ ಅವರ ಜನ್ಮದಿನ ಆಚರಿಸಲಾಗುತ್ತಿದೆ ಎಂದರು.
ಬಿಜೆಪಿ, ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಇವತ್ತು ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆ ನಡೆಯುತ್ತಿದೆ. ಬಿರ್ಸಾ ಮುಂಡಾ ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ಎಲ್ಲ ಸಮಾಜ, ವರ್ಗಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಗಬೇಕಿದೆ ಎಂದು ನುಡಿದರು. ಪಕ್ಷದ ಪ್ರಮುಖರು ಇದ್ದರು.