ಮಹಾರಾಷ್ಟ್ರ,ನ.15(DaijiworldNews/AA): ನರೇಂದ್ರ ಮೋದಿಯವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾ ನಾ ಖಾವೋಂಗಾ, ನಾ ಖಾನೆದೂಂಗಾ ಎನ್ನುತ್ತಾರೆ . ಹಾಗಾದರೆ ಆಪರೇಶನ್ ಕಮಲ ಮಾಡಲು ಹಣ ಎಲ್ಲಿಂದ ಬಂತು ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಅವರು ಇಂದು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ನಲ್ಲಿ ಇಂದು ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಲೋಕಸಭೆ ಉಪ ಚುನಾವಣಾ ಅಭ್ಯರ್ಥಿ ರವೀಂದ್ರ ಚೌಹಾನ್, ವಿಧಾನಸಭೆ ಚುನಾವಣಾ ಅಭ್ಯರ್ಥಿ ಹನುಮಂತರಾವ್ ಪಾಟೀಲ್ ಅವರ ಪರ ಮತ ಯಾಚಿಸಿದರು.
2008 ರಲ್ಲಿ ಎಂಟು ಶಾಸಕರನ್ನು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೊಂಡುಕೊಂಡರು. 2019 ರಲ್ಲಿ 17 ಜನ ಶಾಸಕರನ್ನು ಕೊಂಡರು. ಈ ಕೋಟ್ಯಾಂತರ ರೂಪಾಯಿ ಬಿಜೆಪಿಗೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಆಪರೇಷನ್ ಕಮಲ ಮೂಲಕ ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ನಿದರ್ಶನಗಳಿವೆ. ಮಹಾರಾಷ್ಟ್ರದಲ್ಲಿ ಹಿಂದೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್, ಎನ್.ಸಿ.ಪಿ, ಶಿವಸೇನೆ ಸೇರಿ ಸರ್ಕಾರ ರಚನೆ ಮಾಡಿದ್ದರು. ಎಲ್ಲಾ ಕಡೆ ಆಪರೇಶನ್ ಕಮಲ ಮಾಡಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದೆ. ಏಕನಾಥ ಶಿಂಧೆಯವರು ಶಿವಸೇನೆಯಲ್ಲಿ ಇದ್ದವರು. ಶಿವಸೇನೆಯನ್ನು ಒಡೆದು ಮತ್ತೊಂದು ಗುಂಪು ಮಾಡಿ ಅದಕ್ಕೆ ಬೆಂಬಲ ಕೊಟ್ಟು ಫಡ್ನವಿಸ್ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಅನೇಕ ಕಡೆಗಳಲ್ಲಿ ಬಿಜೆಪಿ ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ನಿದರ್ಶನಗಳಿವೆ ಎಂದರು.
ಕರ್ನಾಟಕದಲ್ಲಿಯೂ ಎರಡು ಬಾರಿ ಬಿಜೆಪಿ ಅಧಿಕಾರ ಮಾಡಿದೆ. ಒಮ್ಮೆಯೂ ಜನರ ಆಶೀರ್ವಾದವನ್ನು ಪಡೆದು ಅಧಿಕಾರಕ್ಕೆ ಬರಲಿಲ್ಲ. 2008 ನಲ್ಲಿ ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಆಪರೇಶನ್ ಕಮಲ ಮಾಡಿ ಮುಖ್ಯಮಂತ್ರಿಯಾದರು. 2019 ಪುನ: ಯಡಿಯೂರಪ್ಪ ಮುಖ್ಯಮಂತ್ರಿಯಾದರು. 2018 ರಲ್ಲಿ ಅವರು ಸರ್ಕಾರ ರಚನೆಗೆ ಬೇಕಿದ್ದ ಸರಳ ಬಹುಮತ 113 ಸ್ಥಾನಗಳು. ಎರಡೂ ಬಾರಿಯೂ ಅವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ನರೇಂದ್ರ ಮೋದಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ.
ನರೇಂದ್ರ ಮೋದಿಯವರು ಗ್ಯಾರಂಟಿ ಯೋಜನೆಗಳ ಬಗ್ಗೆ ಲೇವಡಿ ಮಾಡಿ ಮಾತನಾಡುತ್ತಾರೆ. ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕದಲ್ಲಿ ಘೋಷಣೆ ಮಾಡಿದಾಗ 5 ಗ್ಯಾರಂಟಿಗಳನ್ನೂ ಜಾರಿ ಮಾಡಲಾಗುವುದಿಲ್ಲ. ದೇಶದ ಅಭಿವೃದ್ದಿ ಕುಂಠಿತವಾಗುತ್ತದೆ. ಒಂದು ವೇಳೆ ಜಾರಿಯಾದರೆ ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದರು.
ನರೇಂದ್ರ ಮೋದಿ ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಇದೇ ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ರಾಜಸ್ಥಾನ,ಮಧ್ಯಪ್ರದೇಶ, ಜಾರ್ಖಂಡ್, ಹರಿಯಾಣದಲ್ಲಿ ಘೋಷಣೆ ಮಾಡಿದರು. ಅವರು ಹೇಳುವುದು ಒಂದು ಮಾಡುವುದು ಇನ್ನೊಂದು. ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು ಎಂದರು.