ದೆಹಲಿ, ನ.18(DaijiworldNews/AA): ಒಂದು ದಿನದ ಹಿಂದಷ್ಟೇ ಆಮ್ ಆದ್ಮಿ ಪಕ್ಷ (ಎಎಪಿ) ತೊರೆದಿದ್ದ ಕೈಲಾಶ್ ಗಹ್ಲೋಟ್ ಅವರು ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ವಿಧಾನಸಭಾ ಚುನಾವಣೆಗೆ ತಿಂಗಳುಗಳ ಬಾಕಿಯಿರುವಾಗ ದೆಹಲಿ ಸರ್ಕಾರದ ಹಿರಿಯ ಸಚಿವ ಮತ್ತು ಪಕ್ಷದ ನಾಯಕ ಕೈಲಾಶ್ ಗಹ್ಲೋಟ್ ಅವರು ಎಎಪಿ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಎಎಪಿ ಪಕ್ಷವು ಸ್ವಂತ ರಾಜಕೀಯ ಕಾರ್ಯಸೂಚಿಗಾಗಿ ಹೋರಾಡುತ್ತಿದೆ. ಇದರಿಂದಾಗಿ ದಿಲ್ಲಿಯ ಜನರಿಗೆ ಮೂಲಭೂತ ಸೇವೆಗಳನ್ನು ಒದಗಿಸುವ ನಮ್ಮ ಸಾಮರ್ಥ್ಯವನ್ನು ತೀವ್ರವಾಗಿ ದುರ್ಬಲಗೊಳಿಸಿದೆ. ನಾನು ಪಕ್ಷದಲ್ಲಿದ್ದರೂ ಅನೇಕ ಭರವಸೆಗಳನ್ನು ಈಡೇರಿಸಲಾಗಿಲ್ಲ. ಉದಾಹರಣೆಗೆ ಯಮುನಾ ನದಿಯನ್ನು ಶುಚಿಗೊಳಿಸುವುದಾಗಿ ಮಾತು ನೀಡಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಾನು ದೆಹಲಿಯ ಜನರಿಗೆ ಸೇವೆ ಸಲ್ಲಿಸುವ ಬದ್ಧತೆಯೊಂದಿಗೆ ನನ್ನ ರಾಜಕೀಯ ಪ್ರಯಾಣ ಪ್ರಾರಂಭಿಸಿದ್ದೇನೆ. ನಾನು ಅದನ್ನು ಮುಂದುವರಿಸಲು ಬಯಸುತ್ತೇನೆ. ಹೀಗಾಗಿ ನನಗೆ ಎಎಪಿಯಿಂದ ಹಿಂದೆ ಸರಿಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಆದ್ದರಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.