ಕೋಲ್ಕತ, ಜೂ05(Daijiworld News/SS): ತಮ್ಮನ್ನು ಕೆಣಕಲು ಬಂದವರು ಯಾರೇ ಆದರೂ ಸರ್ವನಾಶವಾಗುತ್ತಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.
ಈದುಲ್ ಫಿತ್ರ್ ಕಾರ್ಯಕ್ರಮದ ವೇಳೆ ಮಾತನಾಡಿದ ದೀದಿ, ಯಾರು ನಮ್ಮ ಜತೆ ಗುದ್ದಾಟಕ್ಕೆ ಬರುತ್ತಾರೋ ಅವರು ನಾಶವಾಗುತ್ತಾರೆ. ಇದು ನಮ್ಮ ಘೋಷಣೆ. ಭಯಪಡಬೇಕಾದ ಅಗತ್ಯವಿಲ್ಲ. ಕೆಲವು ಬಾರಿ ಸೂರ್ಯ ಉದಯಿಸುವಾಗಲೇ ಕಿರಣಗಳು ಖಾರವಾಗಿರುತ್ತವೆ. ಸ್ವಲ್ಪ ಹೊತ್ತಿನ ಬಳಿಕ ಎಲ್ಲವೂ ಸರಿಯಾಗುತ್ತದೆ. ನೀವು ಹೆದರಬೇಕಿಲ್ಲ... ಇವಿಎಂಗಳನ್ನು ಅವರು ಎಷ್ಟು ಬೇಗನೆ ವಶೀಕರಣ ಮಾಡಿಕೊಳ್ಳುತ್ತಾರೋ ಅಷ್ಟೇ ಬೇಗ ಅವರು ದೂರ ಹೋಗುತ್ತಾರೆ ಎಂದು ತಿಳಿಸಿದರು.
ಇದೇ ವೇಳೆ ಜೈ ಶ್ರೀರಾಮ್ ಘೋಷಣೆಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ದೂಷಿಸಿದ ಬ್ಯಾನರ್ಜಿ, ಧರ್ಮವನ್ನು ರಾಜಕೀಯದಲ್ಲಿ ಬೆರೆಸಲಾಗುತ್ತಿದೆ ಎಂದು ಆರೋಪಿಸಿದರು.
ಹಿಂದೂಗಳು ತ್ಯಾಗಕ್ಕೆ ಹೆಸರಾಗಿದ್ದರೆ, ಮುಸ್ಲಿಮರು ಘನತೆಗೆ ಹಾಗೂ ಕ್ರೈಸ್ತರು ಪ್ರೇಮಕ್ಕೆ ಹೆಸರಾಗಿದ್ದಾರೆ. ಅದೇ ರೀತಿ ಸಿಕ್ಖರು ಬಲಿದಾನಕ್ಕೆ ಹೆಸರಾದವರು. ಇದು ನಮ್ಮ ಪ್ರೀತಿಯ ಹಿಂದೂಸ್ಥಾನ ಮತ್ತು ಇದನ್ನು ನಾವು ರಕ್ಷಿಸುತ್ತೇವೆ ಎಂದು ಹೇಳಿದರು.