ಬೆಂಗಳೂರು, ಜೂ 05(Daijiworld News/SM): ಕೇಂದ್ರದಲ್ಲಿ ದಲಿತ ಸಂಸದರನ್ನು ಮಂತ್ರಿ ಮಾಡಲು ನಾವು ತಯಾರಿದ್ದೇವೆ. ಸದ್ಯವಿದ್ದರೆ ರಾಜ್ಯದಲ್ಲಿ ದಲಿತ ಶಾಸಕರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ. ಇತ್ತೀಚೆಗೆ ಪ್ರಕಟಗೊಂಡ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿದ್ದ 7 ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯೇ ಗೆಲುವು ಸಾಧಿಸಿದೆ. ಆದರೆ, ಯಾವೊಬ್ಬ ದಲಿತ ಸಂಸದರಿಗೂ ಕೂಡ ಸಚಿವ ಸ್ಥಾನ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಎಸ್ ವೈ, ಕೇಂದ್ರದಲ್ಲಿ ದಲಿತ ಸಂಸದರನ್ನು ಮಂತ್ರಿ ಮಾಡುವ ಜವಾಬ್ದಾರಿ ನಾವು ತೆಗೆದುಕೊಳ್ಳುತ್ತೇವೆ. ನಿಮಗೆ ತಾಕತ್ತಿದ್ದರೆ ದಲಿತ ವ್ಯಕ್ತಿಯನ್ನು ಸಿಎಂ ಮಾಡಿ ಎಂಬುವುದಾಗಿ ಸವಾಲೆಸೆದಿದ್ದಾರೆ.