ನವದೆಹಲಿ, ಜೂ 5 (Daijiworld News/SM): 2ನೇ ಬಾರಿಗೆ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಈಗಾಗಲೇ ಮೂರು ವಿಶೇಷ ಸಂಪುಟ ಸಮಿತಿಗಳನ್ನು ರಚಿಸಿದ್ದಾರೆ. ಆರ್ಥಿಕ ಸಮಸ್ಯೆ, ಉದ್ಯೋಗ ಹಾಗೂ ರಾಷ್ಟ್ರೀಯ ಭದ್ರತೆಯಲ್ಲಿನ ಲೋಪದೋಷ ಕಂಡು ಹಿಡಿಯುವ ಹಿನ್ನೆಲೆಯಲ್ಲಿ ಪ್ರಧಾನಿ ಮೂರು ಸಂಪುಟ ಸಮಿತಿಗಳನ್ನು ಸಿದ್ಧಪಡಿಸಿದ್ದಾರೆ.
ಭದ್ರತಾ ಕ್ಯಾಬಿನೆಟ್ ಸಮಿತಿ, ಹೂಡಿಕೆ ಮತ್ತು ಬೆಳವಣಿಗೆಗಳ ಕ್ಯಾಬಿನೆಟ್ ಸಮಿತಿ ಹಾಗೂ ಭದ್ರತಾ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯ ಕ್ಯಾಬಿನೆಟ್ ಸಮಿತಿಗಳನ್ನು ಪ್ರಧಾನಿ ಮೋದಿ ಪರಿಚಯಿಸಿದ್ದಾರೆ. ಈ ಎಲ್ಲಾ ಸಮಿತಿಗಳನ್ನು ಫೈನಲ್ ಆಗಿ ಮೋದಿಯವರೇ ಗಮನಿಸಲಿದ್ದಾರೆ.
ಭದ್ರತಾ ಕ್ಯಾಬಿನೆಟ್ ಸಮಿತಿ:
ಇದರಲ್ಲಿ ಐದು ಮಂದಿ ಸದಸ್ಯರು ಇರಲಿದ್ದಾರೆ. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸಮಿತಿಯ ಮುಖ್ಯಸ್ಥರಾಗಿ ಮೋದಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಹೂಡಿಕೆ ಮತ್ತು ಬೆಳವಣಿಗೆಗಳ ಕ್ಯಾಬಿನೆಟ್:
ಪ್ರಧಾನಿ ಮೋದಿ ಮುಖ್ಯಸ್ಥರಾಗಿರುವ ಈ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ರೈಲ್ವೇ ಸಚಿವ ಪಿಯೂಷ್ ಗೋಯಲ್ ಸದಸ್ಯರಾಗಿದ್ದಾರೆ.
ಭದ್ರತಾ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯ ಕ್ಯಾಬಿನೆಟ್ ಸಮಿತಿ:
ಇಲ್ಲೂ ಕೂಡ ಪ್ರಧಾನಿ ನರೇಂದ್ರ ಮೋದಿಯವರೇ ಮುಖ್ಯಸ್ಥರು. ಈ ಸಮಿತಿಯಲ್ಲಿ ಒಟ್ಟು ಹತ್ತು ಮಂದಿ ಸದಸ್ಯರು ಇರಲಿದ್ದಾರೆ. ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರೈಲ್ವೇ ಸಚಿವ ಪಿಯೂಷ್ ಗೋಯಲ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲಗಳ ಸಚಿವ ಧಮೇಂದ್ರ ಪ್ರಧಾನ್, ಕೌಶಲ್ಯ ಮತ್ತು ಉದ್ಯಮಶೀಲ ಸಚಿವ ಮಹೇಂದ್ರ ನಾಥ್ ಪಾಂಡೆ, ರಾಜ್ಯ ಖಾತೆ ಸಚಿವರಾದ ಸಂತೋಷ್ ಕುಮಾರ್ ಗಂಗ್ವಾರ್ ಹಾಗೂ ಹರ್ದೀಪ್ ಸಿಂಗ್ ಪುರಿ ಸದಸ್ಯರಾಗಿದ್ದಾರೆ.