ಬೆಂಗಳೂರು, ನ.24(DaijiworldNews/AA): ದೇವೇಗೌಡರು ಅಧಿಕಾರಕ್ಕಾಗಿ ರಾಜಕಾರಣ ಮಾಡ್ತಿಲ್ಲ. ಅಧಿಕಾರದ ದಾಹಕ್ಕೆ, ಅಧಿಕಾರಕ್ಕೆ ಅಂಟಿಕೊಂಡು ದೇವೇಗೌಡರು ರಾಜಕಾರಣ ಮಾಡ್ತಿಲ್ಲ ಎಂದು ಸಿಪಿ ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ದೇವೇಗೌಡ್ರು ರಾಜಕೀಯ ನಿವೃತ್ತಿ ಘೋಷಿಸಲಿ ಎಂಬ ಸಿಪಿವೈ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ದೇವೇಗೌಡರ ವಯಸ್ಸು 92. ದೇಶ, ರಾಜ್ಯ ಕಟ್ಟಲು ಅವರ ಮಾರ್ಗದರ್ಶನ ಬೇಕು ಅಂತ ಅನೇಕ ವೇಳೆ ಪ್ರಧಾನಿಯವರೇ ಹೇಳಿದ್ದಾರೆ. ಕಳೆದ 62 ವರ್ಷಗಳ ಅವರ ಪ್ರಾಮಾಣಿಕ ರಾಜಕೀಯ ಬದುಕಿನಲ್ಲಿ ಏನನ್ನೂ ಅಪೇಕ್ಷೆ ಇಟ್ಟುಕೊಂಡವರಲ್ಲ. ಅವರು ನಿವೃತ್ತಿ ಹೊಂದಬೇಕಾ? ಮುಂದುವರಿಬೇಕಾ ಅಂತ ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಯಾವುದೇ ಕಾರ್ಯಕರ್ತ ನಿಂತರೂ ಬರುತ್ತಿದ್ದ ನಮ್ಮ ಸಾಂಪ್ರದಾಯಿಕ ಕನಿಷ್ಠ 60 ಸಾವಿರ ಮತಗಳು ಈಗ 87 ಸಾವಿರಕ್ಕೆ ಹೋಗಿ ಮುಟ್ಟಿದೆ. ಪಕ್ಷದ ಅಭಿಮಾನಿಗಳಾಗಿರುವ ಜನ ಯಾರೂ ನಮ್ಮ ಕೈಬಿಟ್ಟಿಲ್ಲ. ಆದ್ರೆ 1 ಸಮುದಾಯದ ಪರವಾಗಿ ದೇವೇಗೌಡರು ಹಿಂದೆ ನಿರ್ಣಯ ಕೈಗೊಂಡಿದ್ದರು, ಮೀಸಲಾತಿ ವಿಚಾರದ ಬಗ್ಗೆಯೂ ತೀರ್ಮಾನ ಮಾಡಿದ್ರು. ಈ ಚುನಾವಣೆಯಲ್ಲೂ ಆ ಸಮುದಾಯವನ್ನ ಕಡೆಗಣಿಸಬಾರದು, ಅವರನ್ನೂ ವಿಶ್ವಾಸಕ್ಕೆ ತಗೊಂಡು ಹೋಗಬೇಕು ಅಂತ ಪ್ರಯತ್ನ ಮಾಡಿದ್ವಿ. ಆದರೆ ನಮ್ಮ ಅವಶ್ಯಕತೆ ಅವರಿಗೆ ಇಲ್ಲ ಅಂತ ಆ ಸಮುದಾಯ ನಿನ್ನೆ ಸ್ಪಷ್ಟ ಸಂದೇಶ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಬೇರೆ ಸಮುದಾಯಗಳನ್ನು ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕೋ ಅದನ್ನು ಮಾಡ್ತೇವೆ ಎಂದರು.
ಮುಂದುವರೆದು ನನ್ನನ್ನ ಪ್ರಚಾರಕ್ಕೇ ಕರೆದಿಲ್ಲ ಎಂಬ ಜಿ.ಟಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜಿಟಿಡಿ ಅವರು ಹಿರಿಯರು, ರಾಜಕೀಯದಲ್ಲಿ ಅವರಿಗೆ ಬಹಳ ಅನುಭವ ಇದೆ. ಅವರು ಯಾವ ಅರ್ಥದಲ್ಲಿ ಮಾತಾಡಿದ್ದಾರೋ ಗೊತ್ತಿಲ್ಲ. ನಮ್ಮ ಪಕ್ಷದ ಕೋರ್ ಕಮಿಟಿ ನಾಯಕರು, ಅವರಿಗೆ ಯಾವ ಗೌರವ ಕೊಡಬೇಕೋ ಅದನ್ನು ನಾವು ಕೊಡ್ತೇವೆ ಎಂದು ಹೇಳಿದರು.