ಕೋಲ್ಕತ್ತಾ , ಜೂ 6 (Daijiworld News/MSP): ಲೋಕಸಭಾ ಚುನಾವಣೆ ಫಲಿತಾಂಶ ಬಂದ ನಂತರವೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವಣ ಘರ್ಷಣೆ ಮುಂದುವರಿದಿದೆ. ಪಶ್ಚಿಮ ಬಂಗಾಳದಲ್ಲಿ ಒಂದೇ ವಾರದಲ್ಲಿ ಮತ್ತೊಂದು ರಾಜಕೀಯ ಹತ್ಯೆಯಾಗಿದೆ. ಕಳೆದೆರಡು ದಿನದ ಹಿಂದೆಯಷ್ಟೇ ಪಶ್ಚಿಮ ಬಂಗಾಳದ ಟಿಎಂಸಿ ಮುಖಂಡ ನಿರ್ಮಲ್ ಕುಂಡು ಎಂಬವರನ್ನು ಕೋಲ್ಕತಾದ ಡುಂಡುಂ ಎಂಬ ಪ್ರದೇಶದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಕೂಚ್ ಬೆಹರ್ ಪ್ರದೇಶದಲ್ಲಿ ಟಿಎಂಸಿ ಕಾರ್ಯಕರ್ತನೋರ್ವನನ್ನು ಕೊಲೆಗೈಯ್ಯಲಾಗಿದೆ.
ಲೋಕಸಭಾ ಚುನಾವಣೆ ಮುಕ್ತಾಯದ ಬಳಿಕ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಸದ್ಯಕ್ಕೆ ನಿಲ್ಲುವುದಿಲ್ಲ ಎನ್ನುವುದನ್ನು ರಾಜಕೀಯ ಪ್ರೇರಿತ ಹತ್ಯೆಗಳು ತೋರಿಸಿಕೊಟ್ಟಿದೆ.
ಹತ್ಯೆಯಾದ ವ್ಯಕ್ತಿಯನ್ನು ಅಜಿಜರ್ ರೆಹಮಾನ್ ಎಂದು ಗುರುತಿಸಲಾಗಿದ್ದು, ಈತ ಟಿಎಂಸಿ ಕಾರ್ಯಕರ್ತ ಎನ್ನಲಾಗಿದೆ. ದುಷ್ಕರ್ಮಿಗಳು ಈತನನ್ನು ಕೊಲೆಗೈದು ಪರಾರಿಯಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಭವಿಸಿದ್ದ ಗಲಾಟೆಗಳಲ್ಲಿ ಅಜಿಜರ್ ರೆಹಮಾನ್ ಭಾಗಿಯಾಗಿದ್ದ ಎಂದು ಕೋಲ್ಕತಾ ಪೊಲೀಸರು ತಿಳಿಸಿದ್ದಾರೆ.
ಕೊಲೆಯಲ್ಲಿ ಬಿಜೆಪಿ ಕೈವಾಡವಿದ್ದು, ರಾಜಕೀಯ ದ್ವೇಷಕ್ಕಾಗಿ ಆತನನ್ನು ಕೊಲೆಗೈಯ್ಯಲಾಗಿದೆ ಎಂದು ಟಿಎಂಸಿ ಆರೋಪಿಸಿದೆ.