ದೆಹಲಿ, ನ.25(DaijiworldNews/AA): ಸಂಸತ್ನ ಚಳಿಗಾಲದ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ಮೊದಲ ದಿನವೇ ವಿಪಕ್ಷಗಳ ಗದ್ದಲಕ್ಕೆ ಕಲಾಪ ಬಲಿಯಾಗಿದೆ. ಉಭಯ ಸದನಗಳ ಕಲಾಪ ಬುಧವಾರಕ್ಕೆ ಮುಂದೂಡಿಕೆಯಾಗಿವೆ.

ಅಮೆರಿಕ ಕೋರ್ಟ್ ನಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಆಗ್ರಹ ಮಾಡಿತ್ತು. ಉತ್ತರಪ್ರದೇಶದ ಸಂಭಾಲ್ನಲ್ಲಿ ಮಸೀದಿ ಸಮೀಕ್ಷೆ ವೇಳೆ ನಡೆದ ಹಿಂಸಾಚಾರ ಖಂಡಿಸಿ ಎಐಎಂಐಎಂ ಸೇರಿ ವಿಪಕ್ಷಗಳು ಘೋಷಣೆ ಕೂಗಿದವು. ಈ ಹಿನ್ನೆಲೆ ಕಲಾಪ ನಡೆಸಲು ಸಾಧ್ಯವಾಗದೇ ರಾಜ್ಯಸಭೆ ಮತ್ತು ಲೋಕಸಭೆಯನ್ನು ಬುಧವಾರಕ್ಕೆ ಮುಂದೂಡಲಾಯಿತು.
ಅಧಿವೇಶನದ ಮೊದಲ ದಿನದಂದು ಸದನವು ಸಭೆ ಸೇರಿದ ಕೂಡಲೇ, ಮಹಾರಾಷ್ಟ್ರದ ನಾಂದೇಡ್ ಕ್ಷೇತ್ರದಿಂದ ಸದನಕ್ಕೆ ಚುನಾಯಿತರಾಗಿದ್ದ ವಸಂತರಾವ್ ಚವಾಣ್ ಮತ್ತು ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದಿಂದ ಚುನಾಯಿತರಾಗಿದ್ದ ಎಸ್ಕೆ ನೂರುಲ್ ಇಸ್ಲಾಂ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಅಧಿವೇಶನದ ಮೊದಲ ದಿನವಾದ ಇಂದು ಪ್ರಧಾನಿ ಮೋದಿ ಮಾತನಾಡಿ, ಜನರಿಂದ ತಿರಸ್ಕರಿಸಲ್ಪಟ್ಟ ಕೆಲವರು, ಗೂಂಡಾಗಿರಿ ಮೂಲಕ ಸಂಸತ್ ನಿಯಂತ್ರಿಸಲು ನೋಡುತ್ತಿದ್ದಾರೆ. ಇದನ್ನು ಇಡೀ ದೇಶದ ಜನ ನೋಡುತ್ತಿದ್ದಾರೆ. ಕಲಾಪಕ್ಕೆ ಅಡ್ಡಿಪಡಿಸುವವರಿಗೆ ಪ್ರಜೆಗಳು ಸಮಯ ನೋಡಿಕೊಂಡು ಶಿಕ್ಷೆ ನೀಡುತ್ತಾರೆ ಎಂದು ತಿಳಿಸಿದರು.
ಇನ್ನು ಸ್ಪೀಕರ್ ಓಂ ಬಿರ್ಲಾ ಮಾತನಾಡಿ, ರಾಜಕೀಯದಿಂದ ಸಂವಿಧಾನವನ್ನು ದೂರ ಇಡುವಂತೆ ಮನವಿ ಮಾಡಿಕೊಂಡರು.