ಹೈದರಾಬಾದ್, ನ.26(DaijiworldNews/TA):ಯಂಗ್ ಇಂಡಿಯಾ ಸ್ಕಿಲ್ಸ್ ಯೂನಿವರ್ಸಿಟಿಗೆ ಅದಾನಿ ಫೌಂಡೇಶನ್ ವಾಗ್ದಾನ ಮಾಡಿದ್ದ 100 ಕೋಟಿ ರೂಪಾಯಿ ದೇಣಿಗೆಯನ್ನು ತಮ್ಮ ಸರ್ಕಾರ ನಿರಾಕರಿಸಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಸೋಮವಾರ ಹೇಳಿದ್ದಾರೆ.

"ಲಾಭದಾಯಕ ಸೌರಶಕ್ತಿ ಪೂರೈಕೆ ಒಪ್ಪಂದಗಳನ್ನು" ಪಡೆದುಕೊಳ್ಳಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಮೇಲೆ ಯುನೈಟೆಡ್ ಸ್ಟೇಟ್ಸ್ನಲ್ಲಿ ಗೌತಮ್ ಅದಾನಿ ಅವರ ದೋಷಾರೋಪಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುವುದಾಗಿ ತಿಳಿಸಿದ್ದಾರೆ.
ವಿಶೇಷ ಮುಖ್ಯ ಕಾರ್ಯದರ್ಶಿ ಹಾಗು ಕೈಗಾರಿಕಾ ಉತ್ತೇಜನ, ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಜಯೇಶ್ ರಂಜನ್ ಡಾ.ಪ್ರೀತಿ ಅದಾನಿಗೆ ಬರೆದಂತಹ ಪತ್ರದಲ್ಲಿ, ‘ನಿಮ್ಮ ಪ್ರತಿಷ್ಠಾನದ ಪರವಾಗಿ ಯಂಗ್ ಇಂಡಿಯಾ ಸ್ಕಿಲ್ಸ್ ಯೂನಿವರ್ಸಿಟಿಗೆ 100 ಕೋಟಿ ರೂ. ನೀಡಿದ್ದಕ್ಕಾಗಿ ನಾವು ನಿಮಗೆ ಕೃತಜ್ಞತೆ ತಿಳಿಸುತ್ತೇವೆ. ಪ್ರಸ್ತುತ ಸಂದರ್ಭದಲ್ಲಿ ಉದ್ಭವಿಸಿರುವ ವಿವಾದಗಳನ್ನು ಗಮನದಲ್ಲಿಟ್ಟುಕೊಂಡು ಹಣ ವರ್ಗಾವಣೆ ಮಾಡದಂತೆ ಮಾನ್ಯ ಮುಖ್ಯಮಂತ್ರಿಗಳು ನನಗೆ ಸೂಚನೆ ನೀಡಿದ್ದಾರೆ ಎಂಬುವುದಾಗಿ ಸ್ಪಷ್ಟನೆ ನೀಡಿದೆ.
ತೆಲಂಗಾಣದ ಗೌರವ ಮತ್ತು ಘನತೆಯನ್ನು ರಕ್ಷಿಸಲು, ನಾನು ಮತ್ತು ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳನ್ನು ಒಳಗೊಂಡ ಯಾವುದೇ ಅನಗತ್ಯ ವಿವಾದಗಳನ್ನು ತಪ್ಪಿಸುವ ಕಾರಣದಿಂದ, ನಾವು ಅದಾನಿ ಅವರ ದೇಣಿಗೆಯನ್ನು ತಿರಸ್ಕರಿಸಲು ನಿರ್ಧರಿಸಿದ್ದೇವೆ. ನಾವು ಯಾರಿಂದಲೂ ಒಂದು ರೂಪಾಯಿ ಕೂಡ ತೆಗೆದುಕೊಂಡಿಲ್ಲ ಎಂಬುವುದಾಗಿ ಸಿಎಂ ರೇವಂತ್ ಸ್ಪಷ್ಟಪಡಿಸಿದ್ದಾರೆ.