ಜೈಪುರ,ನ.26(DaijiworldNews/AK): ಮೇವಾರ್ ರಾಜಮನೆತನದ ಬಿಜೆಪಿ ಶಾಸಕ ವಿಶ್ವರಾಜ್ ಸಿಂಗ್ ಮತ್ತು ಅವರ ಬೆಂಬಲಿಗರಿಗೆ ಉದಯಪುರ ನಗರ ಅರಮನೆಗೆ ಪ್ರವೇಶ ನಿರಾಕರಿಸಲಾಗಿದೆ. ಈ ಹಿನ್ನಲೆಯಲ್ಲಿ ಅರಮನೆಯ ಹೊರಗೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು,ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.

ಅರಮನೆಯ ಒಳಗಿನಿಂದ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದ್ದು, ಇದೇ ತಿಂಗಳ ಆರಂಭದಲ್ಲಿ ಶಾಸಕ ವಿಶ್ವರಾಜ್ ಅವರ ತಂದೆ ಮಹೇಂದ್ರ ಸಿಂಗ್ ಮೇವಾರ್ ಅವರು ನಿಧನರಾಗಿದ್ದರು. ಸೋಮವಾರ (ನವೆಂಬರ್ 25) ಬೆಳಿಗ್ಗೆ ಚಿತ್ತೋರಗಢ ಕೋಟೆಯಲ್ಲಿ ವಿಶ್ವರಾಜ್ ಅವರಿಗೆ ರಾಜಮನೆತನದ ಪಟ್ಟಾಭಿಷೇಕ ನೆರವೇರಿಸಲಾಯಿತು.
ರಾಜಮನೆತನದ ವಿಧಿವಿಧಾನಗಳ ಭಾಗವಾಗಿ ಉದಯಪುರದ ಏಕಲಿಂಗನಾಥ ದೇವಾಲಯ ಮತ್ತು ನಗರದ ಅರಮನೆಗೆ ಹೊಸದಾಗಿ ಪಟ್ಟ ಅಲಂಕರಿಸಿದ ಮುಖ್ಯಸ್ಥರು ಭೇ ಟಿ ನೀಡುವುದು ವಾಡಿಕೆ. ಆದರೆ, ಮಹೇಂದ್ರ ಸಿಂಗ್ ಮೇವಾರ್ ಅವರ ಕಿರಿಯ ಸಹೋದರ ಅರವಿಂದ್ ಸಿಂಗ್ ಮೇವಾರ್ ಅವರ ನಡುವಿನ ದ್ವೇಷದ ಕಾರಣದಿಂದಾಗಿ ವಿಶ್ವರಾಜ್ ಅವರಿಗೆ ಉದಯಪುರ ಅರಮನೆಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ.