ಒಡಿಸ್ಸಾ, ಜೂ 6 (Daijiworld News/MSP): ಕೆಲಸ ಮಾಡದ ಸೋಮಾರಿ ಸಚಿವರನ್ನು ಆರಂಭದಿಂದಲೇ ಹಿಡಿತಕ್ಕೆ ತೆಗೆದುಕೊಂಡು ಸೋಮಾರಿ ಸಚಿವರಿಗೆ ಬಿಸಿ ಮುಟ್ಟಿಸಲೆಂದು ಒಡಿಸ್ಸಾ ಸಿಎಂ ನವೀನ್ ಪಟ್ನಾಯಕ್ ಹೊಸ ಉಪಾಯ ಕಂಡು ಹುಡುಕಿದ್ದಾರೆ. ಇದಕ್ಕಾಗಿ ಐಟಿ ಕಂಪನಿಗಳಲ್ಲಿ ಇರುವಂತೆ ಪ್ರತಿ ಸಚಿವರಿಗೆ ಕೆಲಸದ ಟಾರ್ಗೆಟ್ ಫಿಕ್ಸ್ ಮಾಡಿ ಅದನ್ನು ನಿರ್ಧಿಷ್ಟ ಕಾಲಮಿತಿಯೊಳಗೆ ಮಾಡಿ ಮುಗಿಸಿ ಪ್ರತಿ ತಿಂಗಳು ತಾವು ಮಾಡಿದ ಕೆಲಸ ರಿಪೋರ್ಟ್ ಕಾರ್ಡ್ ಒಪ್ಪಿಸುವಂತೆ ಆದೇಶಿಸಿದ್ದಾರೆ.
ಈ ಹಿಂದಿನ ಆಡಳಿತದ ಅವಧಿಯಲ್ಲಿ ನವೀನ್ ಪಟ್ನಾಯಕ್, ಟೀಮ್ ವರ್ಕ್, ಟೆಕ್ನಾಲಜಿ, ಟ್ರಾನ್ಸಪರೆನ್ಸಿ, ಟ್ರಾನ್ಸ್ಫಾರ್ಮೆಷನ್ ಎನ್ನುವ '4ಟಿ ಫಾರ್ಮೂಲಾ'ವನ್ನು ಜಾರಿಗೆ ತಂದಿದ್ದರು. ಆದರೆ ಈ ಬಾರಿ ಇನ್ನು ಒಂದು ಹೆಜ್ಜೆ ಮುಂದಿಟ್ಟಿರುವ ಅವರು ಪ್ರತಿ ಸಚಿವರು ಸಮರ್ಪಕವಾಗಿ ಕೆಲಸ ನಿರ್ವಹಿಸಲು ರಿಪೋರ್ಟ್ ಕಾರ್ಡ್ ಒಪ್ಪಿಸುವ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಅಭಿವೃದ್ಧಿ, ಬಡತನ ನಿರ್ಮೂಲನೆ, ಮಹಿಳಾ ಕಲ್ಯಾಣ, ದುರ್ಬಲ ವರ್ಗಗಳ ಏಳಿಗೆ ಸೇರಿದಂತೆ ಬಿಜೆಡಿಯು ಚುನಾವಣಾ ಪ್ರಣಾಳಿಕೆಯಲ್ಲಿ ಅನೇಕ ಭರವಸೆಗಳನ್ನು ನೀಡಿದೆ. ಪ್ರಕಟಿಸಿರುವ ಯೋಜನೆಗಳನ್ನು ಅತ್ಯಂತ ದಕ್ಷತೆಯೊಂದಿಗೆ ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಮೇ 29ರಂದು ನಡೆದ ನೂತನ ಸರಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪಟ್ನಾಯಕ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮಾತ್ರವಲ್ಲದೆ ಪ್ರತಿ ಸಚಿವರಿಗೆ ಹಂಚಿದ ಕೆಲಸಕಾರ್ಯಗಳನ್ನು ಸೂಕ್ತವಾಗಿ ನಿಭಾಯಿಸಿ ಅದರ ಮೌಲ್ಯಮಾಪನ ನಡೆಸಿ ಪ್ರತಿ ತಿಂಗಳ 7ನೇ ತಾರೀಖಿನಂದು ವರದಿ ಒಪ್ಪಿಸುವಂತೆ ಸೂಚಿಸಿದ್ದಾರೆ.