ನವದೆಹಲಿ, ನ.26(DaijiworldNews/AA): ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ದ್ವಿಪೌರತ್ವ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ಮಾಡುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ರಾಹುಲ್ ಬ್ರಿಟನ್ ಪ್ರಜೆಯಾಗಿರುವುದರಿಂದ ಅವರ ಭಾರತದ ಪೌರತ್ವ ರದ್ದು ಮಾಡಬೇಕೆಂದು ಕೋರಿ ಕರ್ನಾಟಕದ ಶಿಶಿರ್ ವಿಘ್ನೇಷ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಬಗ್ಗೆ ಪ್ರತಿಕ್ರಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ಅಲಹಾಬಾದ್ ಹೈಕೋರ್ಟ್ ಸೂಚನೆ ನೀಡಿತ್ತು.
ಇನ್ನು ರಾಹುಲ್ ಗಾಂಧಿ ಅವರ ದ್ವಿಪೌರತ್ವದ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಹೈಕೋರ್ಟ್ಗೆ ತಿಳಿಸಿದೆ. ಕೇಂದ್ರ ಗೃಹ ಸಚಿವಾಲಯವು, ಅರ್ಜಿದಾರರು ಮಾಡಿದ ಪ್ರಾತಿನಿಧ್ಯವನ್ನು ಸಚಿವಾಲಯದಲ್ಲಿ ಸ್ವೀಕರಿಸಲಾಗಿದೆ. ಡಿಸೆಂಬರ್ 19 ರಂದು ಈ ವಿಚಾರವನ್ನು ಪಟ್ಟಿ ಮಾಡಿ. ಪರಿಶೀಲನೆಯ ವಿವರಗಳನ್ನು ಅಂದು ತಿಳಿಸಲಾಗುವುದು ಎಂದು ತಿಳಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿಘ್ನೇಶ್ ಅವರು, ಸರ್ಕಾರವು ತಕ್ಷಣವೇ ರಾಹುಲ್ ಗಾಂಧಿಯವರ ಭಾರತೀಯ ಪೌರತ್ವವನ್ನು ಹಿಂತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ರಾಹುಲ್ ಅವರ ಹೆಸರು ಪೌರತ್ವ ದಾಖಲೆಗಳಲ್ಲಿದೆ ಎನ್ನುವುದನ್ನು ನಾವು ಯುಕೆ ಸರ್ಕಾರದ ಜೊತೆ ಸಂವಹನ ಮಾಡಿ ದಾಖಲೆಗಳನ್ನು ಸ್ವೀಕರಿಸಿದ್ದೇವೆ ಎಂದು ತಿಳಿಸಿದರು.
ಮುಂದುವರೆದು ನಾವು ಎಲ್ಲಾ ದಾಖಲೆಗಳನ್ನು ಅಲಹಾಬಾದ್ ಹೈಕೋರ್ಟ್ಗೆ ಸಲ್ಲಿಸಿದ್ದೇವೆ. ಭಾರತೀಯ ಕಾನೂನುಗಳ ಅಡಿಯಲ್ಲಿ ದ್ವಿಪೌರತ್ವವನ್ನು ಅನುಮತಿಸಲಾಗುವುದಿಲ್ಲ. ಯಾರಾದರೂ ಮತ್ತೊಂದು ರಾಷ್ಟ್ರದ ಪೌರತ್ವವನ್ನು ತೆಗೆದುಕೊಂಡ ನಂತರ ಭಾರತೀಯ ಪೌರತ್ವವು ಸ್ವಯಂಚಾಲಿತವಾಗಿ ರದ್ದಾಗುತ್ತದೆ ಎಂದು ಹೇಳಿದರು.