ನವದೆಹಲಿ, ಜೂ 6 (Daijiworld News/MSP): ಆರ್ಬಿಐ ರೆಪೋ ದರವನ್ನ ಇಳಿಕೆ ಮಾಡಿ ಮತ್ತೊಮ್ಮೆ ಜನಸಾಮಾನ್ಯರಿಗೆ ಖುಷಿ ನೀಡಿದೆ. ಆರ್ಬಿಐನ ಆರ್ಥಿಕ ಪರಾಮರ್ಶೆ ಕಮಿಟಿ (ಎಂಪಿಸಿ)ಯು 25 ಬೇಸಿಸ್ ಪಾಯಿಂಟ್ನಷ್ಟು ರೆಪೋ ದರ ಇಳಿಸಿದೆ. ಶೇ. 6 ಇದ್ದ ರೆಪೋ ದರ ಈಗ 5.75ಕ್ಕೆ ಇಳಿದಿದೆ. 3 ದಿನಗಳ ಎಂಪಿಸಿ ಸಭೆ ನಂತರ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇಂದು 2019-20ನೇ ಸಾಲಿನ ಎರಡನೇ ದ್ವಿಮಾಸಿಕ ಮಾನಿಟರಿಪಾಲಿಸಿ ಸ್ಟೇಟ್ಮೆಂಟ್ ಬಿಡುಗಡೆ ಮಾಡಿ, ರೆಪೋ ದರ ಇಳಿಕೆಯನ್ನು ಘೋಷಣೆ ಮಾಡಿದ್ದಾರೆ.
ರೆಪೋ ಅಥವಾ ರೀಪರ್ಚೇಸಿಂಗ್ ರೇಟ್ ಎಂದರೆ ಆರ್ಬಿಐ ಕಮರ್ಷಿಯಲ್ ಬ್ಯಾಂಕ್ಗಳಿಗೆ ನೀಡುವ ಅಲ್ಪಾವಧಿಯ ಸಾಲದ ಮೇಲಿನಬಡ್ಡಿದರ. ಕಳೆದ ಫೆಬ್ರವರಿ ಹಾಗೂ ಏಪ್ರಿಲ್ನಲ್ಲಿ ರೆಪೋ ದರ ಇಳಿಕೆಯಾಗಿತ್ತು.
ಆರ್ಬಿಐ ಬಡ್ಡಿ ದರ ಇಳಿಕೆಯಾದರೆ, ಗೃಹ ಮತ್ತು ವಾಹನ ಸಾಲಗಳ ಬಡ್ಡಿ ದರ ಇಳಿಸಲು ಬ್ಯಾಂಕ್ಗಳಿಗೆ ಸಾಧ್ಯವಾಗುತ್ತದೆ. ರೆಪೊ ದರ ಇಳಿಕೆಯ ಲಾಭವನ್ನು ಬ್ಯಾಂಕ್ಗಳು ಗ್ರಾಹಕರಿಗೆ ವರ್ಗಾಯಿಸಬೇಕು. ಫೆಬ್ರವರಿಯಲ್ಲಿ ರೆಪೊ ದರ ಇಳಿಕೆಯ ಬೆನ್ನಲ್ಲಿ ಕೆಲವು ಬ್ಯಾಂಕ್ಗಳು ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಅಲ್ಪ ಇಳಿಕೆ ಮಾಡಿವೆ. ಈಗ ಮತ್ತೆ ಕಡಿತ ಮಾಡಿದರೆ, ಬಡ್ಡಿ ದರ ಮತ್ತಷ್ಟು ಕಡಿತವಾಗಲಿವೆ. ಸಾಲ ಮಾಡಿದವರಿಗೆ ಇದರಿಂದ ಅನುಕೂಲವಾದರೆ, ಠೇವಣಿಗಳನ್ನು ಇಡುವ ಮಂದಿಗೆ ಕಡಿಮೆ ರಿಟರ್ನ್ಸ್ ದೊರೆಯುತ್ತದೆ.
ಇನ್ನು ಆರ್. ಟಿ.ಜಿ ಎಸ್ ಹಾಗೂ ನೆಫ್ಟ್ ಟ್ರಾನ್ಸಾಕ್ಷನ್ಸ್ ಮೇಲಿನ ಶುಲ್ಕವನ್ನ ಆರ್ಬಿಐ ತೆಗೆದುಹಾಕಿದೆ. ಇದರ ಲಾಭವನ್ನು ಗ್ರಾಹಕರಿಗೆ ನೀಡಲು ಬ್ಯಾಂಕ್ ಗಳಿಗೆ ಸೂಚಿಸಿದೆ.