ನವದೆಹಲಿ, ಜೂ 6 (Daijiworld News/MSP): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಡನೇ ಅವಧಿ ಸರ್ಕಾರದಲ್ಲಿ ಪ್ರಮುಖ ಸಂಪುಟ ಸಮಿತಿಗಳನ್ನು ರಚನೆ ಮಾಡಿದೆ. ರಾಜಕೀಯ ವ್ಯವಹಾರ ಭದ್ರತೆ ಹೂಡಿಕೆ ಮತ್ತು ಬೆಳವಣಿಗೆ ಉದ್ಯೋಗ ಹಾಗೂ ಕೌಶಲ್ಯಾಭಿವೃದ್ದಿ ಸಂಪುಟ ಸಮಿತಿ ಸೇರಿದಂತೆ ಎಂಟು ಕೇಂದ್ರ ಸಂಪುಟ ಸಮಿತಿಗಳನ್ನು ರಚನೆ ಮಾಡಲಾಗಿದೆ.
ಪ್ರಧಾನಿ ಮೋದಿ ಅವರು ಎಂಟರಲ್ಲಿ ಆರು ಸಮಿತಿಗಳ ಮುಖ್ಯಸ್ಥರಾಗಿದ್ದಾರೆ. ಅಮಿತ್ ಶಾ ಅವರು ಎಲ್ಲ ಎಂಟು ಸಮಿತಿಗಳ ಭಾಗವಾಗಿದ್ದರೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಆರರಲ್ಲಿ ಪ್ರತಿನಿಧಿಗಳಾಗಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ೭ ಸಮಿತಿಗಳಲ್ಲಿ , ರೈಲ್ವೆ ಸಚಿವ ಪಿಯೂಶ್ ಗೋಯಲ್ ಐದು ಸಮಿತಿಗಳಲ್ಲಿ ಇದ್ದಾರೆ.
ಅಮಿತ್ ಶಾ ಅವರು ಈ ಎಲ್ಲ ಸಮಿತಿಗಳಲ್ಲಿ ಪ್ರತಿನಿಧಿಗಳಾಗುವ ಮೂಲಕ ಕೇಂದ್ರ ಸಂಪುಟದಲ್ಲಿ ಪ್ರಧಾನಿ ನಂತರದ ಪ್ರಮುಖ ಸ್ಥಾನದಲ್ಲಿ ನಿಂತಿದ್ದಾರೆ. ಪ್ರಧಾನಿಯ ಅನುಪಸ್ಥಿತಿಯಲ್ಲಿ ಅಮಿತ್ ಶಾ ಅವರೇ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ.
ರಾಜನಾಥ ಸಿಂಗ್ ಅವರು ಗೃಹ ಸಚಿವಾಲಯದಿಂದ ರಕ್ಷಣಾ ಇಲಾಖೆಗೆ ಬದಲಾವಣೆ ಆಗಿದ್ದಾರೆ. ಅವರು ಆರ್ಥಿಕ ವ್ಯವಹಾರ ಸಂಪುಟ ಸಮಿತಿ ಮತ್ತು ರಕ್ಷಣಾ ಸಂಪುಟ ಸಮಿತಿಯಲ್ಲಿ ಇದ್ದರೂ ರಾಜಕೀಯ ವ್ಯವಹಾರ ಸಂಪುಟ ಸಮಿತಿಗೆ ಮಾತ್ರ ಸೇರ್ಪಡೆಯಾಗಿಲ್ಲ.