ಬೆಂಗಳೂರು, ಜೂ 6 (Daijiworld News/MSP): ಆನೆ ತಾನು ನಡೆದಿದ್ದೇ ದಾರಿ. ಆನೆಗಳು ಗುಂಪಿನಲ್ಲಿ ಇದ್ದರೆ ಅಪಾಯವಿಲ್ಲ, ಅವುಗಳು ತೊಂದರೆ ಕೊಡೋದಿಲ್ಲ. ಆದರೆ ಒಂಟಿ ಸಲಗ ಯಾವತ್ತಿಗೂ ತುಂಬಾ ಡೇಂಜರ್. ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಬಗೆ. ಇತ್ತೀಚೆಗೆ ಕಾಂಗ್ರೆಸ್ ನ ಹಿರಿಯ ನಾಯಕರಾದ ರೋಷನ್ ಬೇಗ್, ರಾಮಲಿಂಗಾ ರೆಡ್ಡಿ, ಸಿದ್ದರಾಮಯ್ಯ ಅವರ ವಿರುದ್ದ ಬಹಿರಂಗವಾಗಿಯೇ ಅಸಮಧಾನ ಹೊರಹಾಕಿದ್ದರು.
ದುನಿಯಾ ವಿಜಯ್ ಅಭಿನಯದ "ಸಲಗ" ಚಿತ್ರಕ್ಕಾಗಿ ಬೆಂಗಳೂರಿನ ಗವಿಪುರ ಗುಟ್ಟಳ್ಳಿಯ ಬಂಡೆ ಮಹಾಕಾಳಿ ದೇವಾಲಯದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯಾವತ್ತೂ ಆನೆಗಳು ಒಟ್ಟಾಗಿದ್ದರೆ ನಮಗೆ ಅಪಾಯ ಉಂಟು ಮಾಡುವುದಿಲ್ಲ. ಒಂಟಿಯಾಗಿರುವ ಸಲಗಕ್ಕೆ ಭಯ ಜಾಸ್ತಿ, ಅದೆಕ್ಕೇನಾದರೂ ಅಪಾಯವಾಗುತ್ತದೆ ಎಂದು ನಮ್ಮ ಮೇಲೆ ದಾಳಿ ನಡೆಸಲು ಬರುತ್ತದೆ. ಹೀಗಾಗಿ ಒಂಟಿ ಸಲಗ ಯಾವತ್ತಿದ್ದರೂ ಡೇಂಜರ್ ಎಂದರು.
ದುನಿಯಾ ವಿಜಯ್ ನಟನಾಗಿ ಉತ್ತಮ ಹೆಸರು ಗಳಿಸಿದ್ದಾರೆ. ಈಗ ಸಲಗ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಚಿತ್ರದ ಕಥೆ ನನಗೆ ಗೊತ್ತಿಲ್ಲ, ತೆರೆ ಮೇಲೆ ನೋಡುತ್ತೇನೆ ಎಂದು ಚಿತ್ರಕ್ಕೆ ಶುಭ ಹಾರೈಸಿದರು.