ಗುವಾಹತಿ, ಜೂ06(Daijiworld News/SS): ಭಾರತೀಯ ವಾಯುಪಡೆಯ ಎಎನ್-32 ವಿಮಾನ ಜೂ.03ರಂದು ಮಧ್ಯಾಹ್ನ ನಾಪತ್ತೆಯಾಗಿದ್ದು, ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.
8 ಸಿಬ್ಬಂದಿ ಹಾಗೂ ಐವರು ಪ್ರಯಾಣಿಕರಿದ್ದ ಈ ವಿಮಾನ ಅಸ್ಸಾಂನ ಜೊರಾಹಟ್ ವಾಯುನೆಲೆಯಿಂದ ಸೋಮವಾರ (ಜೂ03) ಮಧ್ಯಾಹ್ನ 12.25ಕ್ಕೆ ಟೇಕ್ಆಫ್ ಆಗಿತ್ತು. ಈ ವಿಮಾನ 1.30ರ ಸುಮಾರಿಗೆ ಭಾರತ-ಚೀನಾ ಗಡಿಯಿಂದ 30 ಕಿ.ಮೀ. ದೂರದಲ್ಲಿರುವ ಅರುಣಾಚಲಪ್ರದೇಶದ ಮೆಚುಕು ಅಡ್ವಾನ್ಸ್ ಲ್ಯಾಂಡಿಗ್ ಗ್ರೌಂಡ್ಗೆ ತಲುಪಬೇಕಿತ್ತು. ಆದರೆ, ಮಧ್ಯಾಹ್ನ 1 ಗಂಟೆ ವೇಳೆಗೆ ನಿಯಂತ್ರಣಾ ಕೇಂದ್ರದ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದೆ.
ಜೂ.05ರಂದು ಬೆಳಗ್ಗೆ ಪ್ರತಿಕೂಲ ಹವಾಮಾನದಿಂದಾಗಿ ಶೋಧ ಕಾರ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಆ ನಂತರ ಮತ್ತೆ ಶೋಧ ಕಾರ್ಯ ಪ್ರಾರಂಭಿಸಲಾಗಿತ್ತು. ಗುರುವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯ ಪ್ರಾರಂಭಗೊಂಡಿದೆ. ಹವಾಮಾನವನ್ನು ಆಧರಿಸಿ ವಿಮಾನ ಮತ್ತು ಹೆಲಿಕಾಪ್ಟರ್ಗಳನ್ನು ಶೋಧ ಕಾರ್ಯಕ್ಕೆ ಬಳಸಲಾಗುವುದು ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ವಾಯುಪಡೆ ಮತ್ತು ಅಸ್ಸಾಂ, ಅರುಣಾಚಲ ಪ್ರದೇಶ ಸರ್ಕಾರಗಳು ವಿಮಾನ ಪತ್ತೆ ಮತ್ತು ರಕ್ಷಣಾ ಕಾರ್ಯ ನಡೆಸುತ್ತಿವೆ. ಉಪಗ್ರಹ ಮತ್ತು ಇತರೆ ಅತ್ಯಾಧುನಿಕ ಸಾಧನಗಳು, ಸುಖೋಯ್-30 ಯುದ್ಧ ವಿಮಾನ, ಸಿ-130 ಜೆ ವಿಮಾನ, ಎಂಐ-17 ಹೆಲಿಕಾಪ್ಟರ್ ಬಳಸಿ ವಿಮಾನ ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ.