ಚಿಕ್ಕಮಗಳೂರು, ಜೂ06(Daijiworld News/SS): ರಾಜ್ಯದ ಹಲವೆಡೆ ನೀರಿನ ಅಭಾವ ತೀವ್ರವಾಗಿರುವ ಹಿನ್ನಲೆಯಲ್ಲಿ, ಮಳೆಗಾಗಿ ಮೈತ್ರಿ ಸರಕಾರ ವಿಶೇಷ ಪೂಜೆ, ಹೋಮದ ಮೊರೆ ಹೋಗಿದೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿರುವ ಕಿಗ್ಗಾ ಋಷ್ಯಶೃಂಗ ದೇವಾಲಯದಲ್ಲಿ ಸಚಿವ ಡಿ.ಕೆ ಶಿವಕುಮಾರ್, ಪಿ.ಟಿ ಪರಮೇಶ್ವರ್ ನಾಯ್ಕ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಳೆ ದೇವರೆಂದೇ ಖ್ಯಾತಿಯಾಗಿರೋ ಋಷ್ಯಶೃಂಗನಿಗೆ ಪರ್ಜನ್ಯ ಹೋಮ, ಜಪ ಮಾಡಿದ್ದಾರೆ.
21 ಅರ್ಚಕರು ರಾಜ್ಯದಲ್ಲಿ ಮಳೆಗಾಗಿ ಪರ್ಜನ್ಯ ಜಪ ನಡೆಸಿದ್ದು, ಪ್ರತಿಯೋರ್ವರಿಂದಲೂ 1008 ಪರ್ಜನ್ಯ ಜಪ ನಡೆದಿದೆ. ರಾಜ್ಯದಲ್ಲಿ ಸಮೃದ್ಧ ಮಳೆಗಾಗಿ ಋಷ್ಯಶೃಂಗನಿಗೆ ರುದ್ರಾಭಿಷೇಕವನ್ನು ಮಾಡಲಾಗಿದೆ.
ಜೂ.6ರಂದು ಬೆಳಿಗ್ಗೆ 5.30 ರಿಂದ ಪರ್ಜನ್ಯ ಹೋಮ ಆರಂಭವಾಗಿದ್ದು, ಜೂ.5ರ ರಾತ್ರಿಯೇ ಡಿ.ಕೆ.ಶಿ, ಪಿ.ಟಿ ಪರಮೇಶ್ವರ್ ನಾಯ್ಕ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಿದ್ದರು ಎಂದು ತಿಳಿದುಬಂದಿದೆ. ಋಷ್ಯಶೃಂಗ ದೇವರು ಸಚಿವ ಡಿ.ಕೆ.ಶಿವಕುಮಾರ್ ಇಷ್ಟದೈವವಾಗಿದ್ದು, ಈ ಹಿಂದೆ ಕೂಡ ಮಳೆಗಾಗಿ ಡಿಕೆಶಿ ಇಲ್ಲಿ ಬೇಡಿಕೊಂಡಿದ್ದರು ಎನ್ನಲಾಗಿದೆ. ಆ ವೇಳೆ ನಾಡಿನಲ್ಲಿ ಸಮೃದ್ಧ ಮಳೆಯಾಗಿತ್ತು. ಮಳೆಯಾದ ಮೇಲೆ ಡಿಕೆಶಿ ಹರಕೆ ತೀರಿಸಿದ್ದರು. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿರುವ ಕಿಗ್ಗಾ ಋಷ್ಯಶೃಂಗ ದೇವಾಲಯಕ್ಕೆ ತೆರಳಿ ಹರಕೆ ತೀರಿಸಿದ್ದರು.