ಬೆಂಗಳೂರು, ಡಿ.03(DaijiworldNews/AA): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಬೆಂಗಳೂರಿಗೆ ಬಂದಿರುವುದು ಪಕ್ಷದ ಆಂತರಿಕ ಸಂಘರ್ಷದ ಬಗ್ಗೆ ಅಭಿಪ್ರಾಯ ಸಂಗ್ರಹಕ್ಕೆ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ಪಷ್ಟನೆ ನೀಡಿದರು.

ಬೆಂಗಳೂರಿನಲ್ಲಿ ಸೋಮವಾರ ಸಭೆ ಸೇರಿದ್ದ ಸುಮಾರು 21 ರಷ್ಟು ಬಿಜೆಪಿ ಜಿಲ್ಲಾಧ್ಯಕ್ಷರು, ಇಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ತರುಣ್ ಚುಗ್ಗೆ ದೂರು ನೀಡಲಿದ್ದಾರೆ ಎಂಬ ವರದಿಯ ಕುರಿತು ಮಾತನಾಡಿದ ಅವರು, ಕರ್ನಾಟಕ ಸೇರಿದಂತೆ ದೇಶಾದ್ಯಂತ ಸಂಘಟನಾ ಪರ್ವ ನಡೆಯುತ್ತಿದೆ. ಸದಸ್ಯತ್ವ ಅಭಿಯಾನ, ಜಿಲ್ಲಾ, ಮಂಡಲ ಸದಸ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತರುಣ್ ಚುಗ್ ಬೆಂಗಳೂರಿಗೆ ಬಂದಿದ್ದಾರೆ ಎಂದರು.
ಪಕ್ಷದ ಕಚೇರಿಯಲ್ಲಿ ಇಡೀ ದಿನ ಸಂಘಟನಾ ಸಭೆಗಳು ನಡೆಯಲಿವೆ. ಇದು ಬಿಟ್ಟರೆ ರಾಜಕೀಯ ವಿಚಾರ ಆಗಲೀ ಮತ್ಯಾವುದರ ಬಗ್ಗೆಯೂ ಏನೂ ಇಲ್ಲ. ಅಂತಹ ವಿಚಾರದ ಕುರಿತು ಚರ್ಚೆ ಇದ್ದಿದ್ದರೆ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಬರುತ್ತಿದ್ದರು. ತರುಣ್ ಚುಗ್ ಬಂದಿರುವುದು ಪಕ್ಷ ಸಂಘಟನೆ ದೃಷ್ಟಿಯಿಂದ ಮಾತ್ರ ಎಂದು ತಿಳಿಸಿದರು.