ನವದೆಹಲಿ, ಜೂ06(Daijiworld News/SS): ಉನ್ನತ ಅಧಿಕಾರಿಗಳೊಂದಿಗೆ ಆಂತರಿಕ ಭದ್ರತೆ ಹಾಗೂ ನಕ್ಸಲ್ ಸಮಸ್ಯೆ ಕುರಿತಂತೆ ಗೃಹ ಸಚಿವ ಅಮಿತ್ ಶಾ ಚರ್ಚೆ ನಡೆಸಿದ್ದಾರೆ.
ನಕ್ಸಲೀಯರಿಗೆ ಹಣಕಾಸೂ ಪೂರೈಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಅವರ ನಾಯಕರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಚರ್ಚೆ ನಡೆಯಿತು ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. 44 ಜಿಲ್ಲೆಗಳನ್ನು ಮಾವೋವಾದಿ ಪೀಡಿತ ಪ್ರದೇಶಗಳ ಪಟ್ಟಿಯಿಂದ ಸರ್ಕಾರ ತೆಗೆದುಹಾಕಿದ್ದರೂ ಛತ್ತೀಸ್ ಗಡ, ಬಿಹಾರ, ಜಾರ್ಖಂಡ್ ಹಾಗೂ ಮಹಾರಾಷ್ಟ್ರದಲ್ಲಿ ಈಗಲೂ ಕೂಡಾ ನಕ್ಸಲ್ ಸಮಸ್ಯೆ ತೀವ್ರವಾಗಿದೆ ಎಂದು ಮೂಲಗಳು ಹೇಳಿವೆ.
ಛತ್ತೀಸ್ ಗಡದ ದಾಂತೇವಾಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಭೀಮಾ ಮಾಂಡವಿ ಹಾಗೂ ನಾಲ್ವರು ಭದ್ರತಾ ಸಿಬ್ಬಂದಿಯನ್ನು ಕಳೆದ ತಿಂಗಳು ನಕ್ಸಲೀಯರು ಹತ್ಯೆ ಮಾಡಿದ್ದರು. ನಂತರ ಮಹಾರಾಷ್ಟ್ರದ ಗಡ್ ಚಿರೋಲಿಯಲ್ಲಿ ಮಾವೋವಾದಿಗಳು ಸಿಡಿಸಿದ ಐಇಡಿ ಸ್ಪೋಟದಿಂದ 15 ಮಂದಿ ಭದ್ರತಾ ಸಿಬ್ಬಂದಿಗಳು ಹತ್ಯೆಯಾಗಿದ್ದರು. ಹೀಗಾಗಿ ಉತ್ತಮ ಸಂಪರ್ಕಕ್ಕಾಗಿ 10 ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ 4, 072 ಮೊಬೈಲ್ ಟವರ್ ಸ್ಥಾಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಮಾತ್ರವಲ್ಲ, 96 ಜಿಲ್ಲೆಗಳಲ್ಲಿ ಈ ಟವರ್'ಗಳ ನಿರ್ಮಾಣಕ್ಕಾಗಿ 7330 ಕೋಟಿ ಹಣ ವೆಚ್ಚ ಮಾಡಲು ಕೇಂದ್ರ ಸಚಿವ ಸಂಪುಟ ಈಗಾಗಲೇ ಮಂಜೂರಾತಿ ನೀಡಿದೆ.
ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್, ಗುಪ್ತಚರ ವಿಭಾಗದ ಮುಖ್ಯಸ್ಥ ರಾಜೀವ್ ಜೈನ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬ ಹಾಗೂ ಕೇಂದ್ರ ಗೃಹ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.