ಬೆಂಗಳೂರು, ಡಿ.03(DaijiworldNews/AA): ಅನಾರೋಗ್ಯದ ಹಿನ್ನೆಲೆ ದರ್ಶನ್ ಅವರು ಮಧ್ಯಂತರ ಜಾಮೀನು ಪಡೆದಿದ್ದು, ಇದೀಗ ರೆಗ್ಯುಲರ್ ಬೇಲ್ ಪಡೆಯಲು ಯತ್ನಿಸುತ್ತಿದ್ದಾರೆ. ಅದರಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಇನ್ನಿತರ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್, ಲಕ್ಷ್ಮಣ್ ಮುಂತಾದವರು ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದು, ಇದೀಗ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್ 6ಕ್ಕೆ ಮುಂದೂಡಿದೆ.

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾದ ಹಿನ್ನೆಲೆ ಇನ್ನಷ್ಟು ದಿನಗಳ ಕಾಲ ಪವಿತ್ರಾ ಗೌಡ ಅವರು ಜೈಲಿನಲ್ಲಿ ಇರುವಂತಾಗಿದೆ. ದರ್ಶನ್ ಪರವಾಗಿ ಹಿರಿಯ ಲಾಯರ್ ಸಿ.ವಿ. ನಾಗೇಶ್ ಅವರು ಇತ್ತೀಚೆಗೆ ಹೈಕೋರ್ಟ್ನಲ್ಲಿ ವಾದ ಮಂಡನೆ ಮಾಡಿದ್ದರು. ಇಂದು (ಡಿ.3) ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲ ಸೆಬಾಸ್ಟಿಯನ್ ಅವರು ವಾದ ಮಂಡಿಸಿದ್ದಾರೆ. ಪವಿತ್ರಾ ಗೌಡ ಅವರಿಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಎಲ್ಲರೂ ಹೊಡೆದ ಕಾರಣದಿಂದ ರೇಣುಕಾಸ್ವಾಮಿ ಸಾವನ್ನಪ್ಪಿರಬಹುದು ಎಂದು ವಾದಿಸಿದ್ದಾರೆ.
ಆರೋಪಿಗಳ ಪರವಾಗಿ ವಕೀಲರ ವಾದ ಮಂಡನೆ ಅಂತ್ಯವಾಗಿದೆ. ಡಿಸೆಂಬರ್ 6ರಂದು ಎಸ್ಪಿಪಿ ಪ್ರಸನ್ನ ಕುಮಾರ್ ಅವರು ವಾದಿಸಲಿದ್ದಾರೆ. ಆ ಬಳಿಕ ಜಾಮೀನಿಗೆ ಸಂಬಂಧಿಸಿದ ತೀರ್ಪನ್ನು ಹೈಕೋರ್ಟ್ ನೀಡಲಿದೆ. ಒಂದು ವೇಳೆ ಜಾಮೀನು ಸಿಗದಿದ್ದರೆ ಅವರ ಜೈಲುವಾಸ ಮುಂದುವರಿಯಲಿದೆ.