ಇಟಾನಗರ, ಜೂ06(Daijiworld News/SS): ಭಾರತೀಯ ವಾಯುಪಡೆಯ ಎಎನ್-32 ವಿಮಾನ ನಾಪತ್ತೆಯಾಗಿದ್ದು, ಈ ವಿಮಾನದ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿರುವ ಬೆನ್ನಲ್ಲೇ ಅರುಣಾಚಲ ಪ್ರದೇಶದ ನಿವಾಸಿಗಳು ಬೆಟ್ಟದಿಂದ ದಟ್ಟ ಹೊಗೆ ಬರುತ್ತಿರುವುದನ್ನು ನೋಡಿದ್ದಾಗಿ ಹೇಳಿದ್ದಾರೆ.
8 ಸಿಬ್ಬಂದಿ ಹಾಗೂ ಐವರು ಪ್ರಯಾಣಿಕರಿದ್ದ ಈ ವಿಮಾನ ಅಸ್ಸಾಂನ ಜೊರಾಹಟ್ ವಾಯುನೆಲೆಯಿಂದ ಸೋಮವಾರ (ಜೂ03) ಮಧ್ಯಾಹ್ನ 12.25ಕ್ಕೆ ಟೇಕ್ಆಫ್ ಆಗಿತ್ತು. ಈ ವಿಮಾನ 1.30ರ ಸುಮಾರಿಗೆ ಭಾರತ-ಚೀನಾ ಗಡಿಯಿಂದ 30 ಕಿ.ಮೀ. ದೂರದಲ್ಲಿರುವ ಅರುಣಾಚಲಪ್ರದೇಶದ ಮೆಚುಕು ಅಡ್ವಾನ್ಸ್ ಲ್ಯಾಂಡಿಗ್ ಗ್ರೌಂಡ್ಗೆ ತಲುಪಬೇಕಿತ್ತು. ಆದರೆ, ಮಧ್ಯಾಹ್ನ 1 ಗಂಟೆ ವೇಳೆಗೆ ನಿಯಂತ್ರಣಾ ಕೇಂದ್ರದ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು.
ಇದೀಗ ತಂಬಿ ಗ್ರಾಮದ ಮೂವರು ನಿವಾಸಿಗಳು ಸೋಮವಾರ ಮಧ್ಯಾಹ್ನ ಸಿಯಾಂಗ್ ಜಿಲ್ಲೆಯ ಮೊಲೊ ಗ್ರಾಮದ ಕಡೆಗೆ ಪರ್ವತದಿಂದ ದಟ್ಟ ಹೊಗೆಯು ಹೋಗುತ್ತಿದ್ದದ್ದನ್ನು ನೋಡಿರುವುದಾಗಿ ತಿಳಿಸಿದ್ದು, ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಡಿಜಿಪಿ ಎಸ್ಬಿಕೆ ಸಿಂಗ್ ತಿಳಿಸಿದ್ದಾರೆ.
ಮಾತ್ರವಲ್ಲ, ನಾಪತ್ತೆಯಾಗಿರುವ ವಿಮಾನದ ಪತ್ತೆಗಾಗಿ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಾಂಡು, ಸಿಯಾಂಗ್, ಪಶ್ಚಿಮ ಸಿಯಾಂಗ್ ಮತ್ತು ಲೋವರ್ ಸಿಯಾಂಗ್ ಮತ್ತು ಶಿ ಯೋಮಿ ಜಿಲ್ಲೆಗಳ ಡೆಪ್ಯುಟಿ ಕಮಿಷನರ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಹುಡುಕಾಟವನ್ನು ತೀವ್ರಗೊಳಿಸುವಂತೆ ಹೇಳಿದ್ದಾರೆ.