ಬೆಂಗಳೂರು, ಜೂ 06 (Daijiworld News/SM): ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಒಡಕುಗಳಿವೆ ಎಂದು ಬಿಜೆಪಿ ಪಕ್ಷ ಆರೋಪಿಸುತ್ತಲೇ ಬಂದಿದೆ. ಇದೀಗ ಇದಕ್ಕೆ ಪುಷ್ಠಿ ನೀಡುವ ಅಂಶವೊಂದು ರಾಜ್ಯದಲ್ಲಿ ನಡೆದಿದೆ. ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖೀಲ್ ಕುಮಾರಸ್ವಾಮಿ ‘ಜೆಡಿಎಸ್ ಕಾರ್ಯಕರ್ತರಿಗೆ ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧರಾಗುವಂತೆ ಹೇಳಿರುವ’ ವಿಡಿಯೋ ವೈರಲ್ ಆಗಿದೆ.
ರಾಜ್ಯದಲ್ಲಿನ ಸಮ್ಮಿಶ್ರ ಸರಕಾರದ ಪಾಲುದಾರರಲ್ಲಿ ವಿಶ್ವಾಸದ ಕೊರತೆ ಇದೆ ಎಂಬುದಕ್ಕೆ ಇದು ಸಾಕ್ಷಿ ಎಂಬಂತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ನಿಖೀಲ್ ಅವರು “ರಾಜ್ಯ ವಿಧಾನಸಭೆಗೆ ಯಾವುದೇ ಹೊತ್ತಲ್ಲಿ ಚುನಾವಣೆ ಎದುರಾಗಬಹುದು ಎಂದಿದ್ದಾರೆ.
“ಚುನಾವಣೆ ಸಿದ್ಧತೆಯನ್ನು ನಾವು ಈಗಿಂದೀಗಲೇ ಆರಂಭಿಸಬೇಕಾಗುತ್ತದೆ. ಅಂತಿಮ ಕ್ಷಣದ ತಯಾರಿ ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಮುಂದಿನ ತಿಂಗಳಿಂದಲೇ ನಾವು ಚುನಾವಣೆಯ ಸಿದ್ಧತೆಗಳನ್ನು ನಡೆಸಬೇಕಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಚುನಾವಣೆ ಯಾವಾಗ ಬರುತ್ತದೆ ಎಂದು ತಿಳಿದಿಲ್ಲ. ಆದ್ದರಿಂದ ನಾವು ಸದಾಕಾಲ ಸಿದ್ಧರಿರಬೇಕೆಂದು ಅವರು ವೀಡಿಯೋದಲ್ಲಿ ತಿಳಿಸಿದ್ದಾರೆ.