ಬಾಗಲಕೋಟೆ, ಜೂ 07 (Daijiworld News/MSP): ಗ್ರಾಮ ವಾಸ್ತವ್ಯ ಎನ್ನುವ ನಾಟಕ ಜನರ ಗಮನ ಬೇರೆಡೆ ಸೆಳೆಯಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಡುತ್ತಿರುವ ಕುತಂತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯ ಕೊರತೆಯಾಗಿದ್ದು ಹಲವು ಜಿಲ್ಲೆಗಳಲ್ಲಿ ಬರಗಾಲ ಉಂಟಾಗಿದೆ. ಬರಗಾಲ ಪೀಡಿದ ಪ್ರದೇಶಗಳಿಗೆ ಭೇಟಿ ಕೊಡುವ ಬದಲು ಇಂತಹ ಸಮಯದಲ್ಲ್ಲಿ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಎಂದು ಹೊರಟ್ಟಿದ್ದಾರಲ್ಲ. ಇದು ಜನರ ಗಮನ ಸೆಳೆಯುವ ಕುತಂತ್ರವಲ್ಲದೇ ಮತ್ತಿನ್ನೇನು ಎಂದು ಪ್ರಶ್ನಿಸಿದರು.
ರಾಜಕೀಯ ದೊಂಬರಾಟ ಮಾಡುತ್ತಿರುವ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಲಿಲ್ಲ. ಇನ್ನು ಮೈತ್ರಿ ಸರ್ಕಾರ ರಾಜಕೀಯ ಕಚ್ಚಾಟದಲ್ಲಿಯೇ ತೊಡಗಿದೆ. ಒಂದೆಡೆ ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಜೆಡಿಎಸ್ ಮುಖಂಡರಿಗೆ ಹೇಳುತ್ತಾರೆ. ಆದರೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆಗೆ ಅವಕಾಶ ನೀಡುವುದಿಲ್ಲ. ನಿಮಗೆ ಸಮರ್ಥ ಆಡಳಿತ ನೀಡಲು ಸಾಧ್ಯವಿಲ್ಲದಿದ್ದರೆ ಬಿಜೆಪಿಯ ನಾವು 105 ಮಂದಿ ಇದ್ದೇವೆ. ನೀವು ರಾಜೀನಾಮೆ ಕೊಟ್ಟು ಹೊರನಡೆಯಿರಿ. ನಾವು ಆಡಳಿತ ಮಾಡುತ್ತೇವೆ. ಆದರೆ ಮಧ್ಯಂತರ ಚುನಾವಣೆಗೆ ಅವಕಾಶ ನೀಡುವುದಿಲ್ಲ ಎಂದರು.