ಶ್ರೀನಗರ, ಜೂ 07 (Daijiworld News/MSP): ಜಮ್ಮು ಮತ್ತು ಕಾಶ್ಮೀರದಲ್ಲಿ ಮನೆಯೊಳಗೆ ಅಡಗಿ ಕುಳಿತು ದಾಳಿಗೆ ಸಂಚು ರೂಪಿಸುತ್ತಿದ್ದ ನಾಲ್ವರು ಉಗ್ರರನ್ನು ಭಾರತೀಯ ಸೇನೆ ದಾಳಿ ನಡೆಸಿ ಹೊಡೆದುರುಳಿಸಿದ್ದಾರೆ.
ಭಾರತೀಯ ಸೇನೆಗೆ ಪುಲ್ವಾಮ ಜಿಲ್ಲೆಯ ಲಸ್ಸಿಪೋರಾದ ಪಂಜ್ರನ್ ಪ್ರದೇಶದಲ್ಲಿನ ಮನೆಯೊಂದರಲ್ಲಿ ಉಗ್ರರು ಅಡಗಿ ಕಾರ್ಯಾಚರಣೆ ನಡೆಸುತ್ತಿರುವ ಮಾಹಿತಿ ದೊರಕಿತ್ತು. ತಕ್ಷಣ ಉಗ್ರರ ವಿರುದ್ದ ಕಾರ್ಯಾಚರಣೆಗೆ ಇಳಿದ ಸೇನಾಪಡೆಗಳು ಮನೆಯನ್ನು ಸುತ್ತುವರೆರಿವೆ. ಸೈನಿಕರ ಮನೆಯ ಸುತ್ತ ಆವರಿಸುತ್ತಿದ್ದಂತೆ ಎಚ್ಚೆತ್ತ ಉಗ್ರರು ಗುಂಡಿನ ದಾಳಿ ನಡೆಸಲು ಆರಂಭಿಸಿದ್ದು, ಈ ವೇಳೆ ಸೈನಿಕರೂ ಕೂಡ ಪ್ರತಿದಾಳಿ ಮಾಡಿದ್ದಾರೆ.
ಭಾರತೀಯ ಸೈನಿಕರ ಗುಂಡೇಟಿಗೆ ಮನೆಯಲ್ಲಿ ಅಡಗಿ ಕುಳಿತು ದಾಳಿಗೆ ಸಂಚು ರೂಪಿಸಿದ್ದ 4 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಸಿಆರ್ ಪಿಎಫ್ ಹಾಗೂ ವಿಶೇಷ ಕಾರ್ಯಾಚರಣೆ ಪಡೆಯ 44 ರಾಷ್ಟ್ರೀಯ ರೈಫಲ್ಸ್ ದಳ ಸೈನಿಕರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದರು. ಇನ್ನು ಉಗ್ರರು ದಾಳಿ ನಡೆಸಲು ತಂದಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸೇನೆ ವಶಕ್ಕೆ ಪಡೆದಿದೆ.