ಬಳ್ಳಾರಿ, ಜೂ07(Daijiworld News/SS): ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಎಂ.ಎಸ್ ಸುಭಾಸ ಅವರು ನೀಡಿದ ದೂರಿನ ಮೇರೆಗೆ ಇಬ್ಬರು ಪತ್ರಕರ್ತರು ಸೇರಿ ನಾಲ್ವರನ್ನು ಬಂಧಿಸಿರುವ ಘಟನೆ ವರದಿಯಾಗಿದೆ.
ಖಾಸಗಿ ವಾಹಿನಿಯ ವರದಿಗಾರರಾದ ವೀರೇಶ್ ದಾನಿ, ನಾಗಭೂಷನ್ ಸೇರಿದಂತೆ ಹಗರಿಬೊಮ್ಮನಹಳ್ಳಿಯ ರೌಡಿಶೀಟರ್ ಸಿ.ಎಂ ಮಂಜುನಾಥಯ್ಯ ಮತ್ತು ಅವನ ಸಹಚರ ವೀರೇಶ ಎಂಬವರನ್ನು ಬಳ್ಳಾರಿಯ ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳ ನೇಮಕಾತಿಯಲ್ಲಿ ಭ್ರಷ್ಟಚಾರ ನಡೆದಿದೆ ಎಂಬ ಆರೋಪದ ಮೇರೆಗೆ ವರದಿಗಾರರು ಸುದ್ದಿ ಮಾಡಿ ತಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಿದ್ದರು. ಆದರೆ ವಿಶ್ವವಿದ್ಯಾಲಯದ ಕುಲಪತಿ ಎಂ.ಎಸ್ ಸುಭಾಸ, ಖಾಸಗಿ ವಾಹಿನಿ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡದೆ ಸುದ್ದಿ ಮಾಡಿದೆ ಎಂದು ವರದಿಗಾರರ ವಿರುದ್ಧ ದೂರು ನೀಡಿದ್ದರು.
ಈ ದೂರಿನ ಮೇರೆಗೆ ಇಬ್ಬರು ವರದಿಗಾರರು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.