ನವದೆಹಲಿ, ಜೂ07(Daijiworld News/SS): ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಶಿವಲಿಂಗದ ಮೇಲೆ ಕುಳಿತ ಚೇಳು’ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಶಶಿತರೂರ್ ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೆಹಲಿ ಕೋರ್ಟಿನಿಂದ ಜಾಮೀನು ಪಡೆದುಕೊಂಡಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಶಶಿ ತರೂರ್ ಅವರು, ನರೇಂದ್ರ ಮೋದಿ ಅವರನ್ನು ಆರ್ ಎಸ್ ಎಸ್ ನಾಯಕರೊಬ್ಬರು ಶಿವಲಿಂಗದ ಮೇಲೆ ಕುಳಿತ ಚೇಳು ಎಂದು ಕರೆದಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಶಶಿ ತರೂರ್ ಅವರ ಹೇಳಿಕೆಯಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ದೆಹಲಿಯ ಬಿಜೆಪಿ ನಾಯಕ ರಾಜೀವ್ ಬಬ್ಬರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಇದೀಗ ಜಾಮೀನು ಕೋರಿ ಶಶಿ ತರೂರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು, ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಜೊತೆಗೆ, 20 ಸಾವಿರ ರೂ. ವೈಯಕ್ತಿಕ ಖಾತರಿ ಮೊತ್ತ ಪಾವತಿಸುವಂತೆ ತರೂರ್'ಗೆ ಷರತ್ತು ವಿಧಿಸಿದ್ದಾರೆ.
ಶಶಿ ತರೂರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಹಾಗೂ 500 ಅಡಿಯಲ್ಲಿ ದೂರು ದಾಖಲಿಸಲಾಗಿದೆ.