ನವದೆಹಲಿ, ಜೂ07(Daijiworld News/SS): ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ನೆಲೆಗಳ ಮೇಲೆ ತನ್ನ ಬೇಹುಗಾರರನ್ನು ಬಳಸಿಕೊಂಡು ಭಯೋತ್ಪಾದನಾ ದಾಳಿ ನಡೆಸುವ ಪಾಕಿಸ್ತಾನದ ಸಂಚು ಮತ್ತೆ ಬಯಲಾಗಿದೆ.
ಈ ಕುರಿತು ಕಣಿವೆ ರಾಜ್ಯದ ದೋಡಾ, ಉಧಂಪುರ ಮತ್ತು ಕಥುವಾದಲ್ಲಿ ನಾಲ್ವರು ಐಎಸ್ಐ ಬೇಹುಗಾರರನ್ನು ಬಂಧಿಸುವ ಮೂಲಕ ಭದ್ರತಾಪಡೆ ಯೋಧರು ಈ ಸಂಚನ್ನು ಬಯಲುಗೊಳಿಸಿದ್ದಾರೆ. ದೋಡಾ ಜಿಲ್ಲೆಯ ಮುಶ್ತಾಖ್ ಅಹ್ಮದ್, ಕಥುವಾ ಜಿಲ್ಲೆಯ ನದೀಂ ಅಖ್ತರ್ ಬಂಧಿತರು. ಇನ್ನಿಬ್ಬರ ಹೆಸರು ಬಹಿರಂಗಗೊಂಡಿಲ್ಲ.
ಜಮ್ಮು ಪ್ರದೇಶದಲ್ಲಿ ಸೇನಾ ನೆಲೆಗಳ ವಿಡಿಯೋ ಚಿತ್ರೀಕರಿಸುವಾಗ ಇವರನ್ನು ಬಂಧಿಸಲಾಯಿತು ಎಂದು ಭದ್ರತಾಪಡೆ ಮೂಲಗಳು ತಿಳಿಸಿವೆ. ಇವರೆಲ್ಲರೂ ಪಾಕಿಸ್ತಾನದ ಐಎಸ್ಐನ ಕರ್ನಲ್ ಇಫ್ತಿಕಾರ್ ಅಹ್ಮದ್ ಜತೆ ನೇರ ಸಂಪರ್ಕ ಹೊಂದಿದ್ದರು ಎಂದು ಹೇಳಿವೆ.
ಬಂಧಿತರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದಾಗ ಬೇಹುಗಾರರನ್ನು ಬಳಸಿಕೊಂಡು ಉಗ್ರ ದಾಳಿ ನಡೆಸುವ ಪಾಕ್ನ ಕುಕೃತ್ಯ ಬಯಲಾಗಿದೆ.