ಬೆಂಗಳೂರು, ಜೂ08(Daijiworld News/SS): ಪಿಯುಸಿ ತರಗತಿಯಲ್ಲಿ ಐಚ್ಛಿಕ ಪಠ್ಯ ವಿಷಯವಾಗಿ ತುಳುವನ್ನು ಸೇರ್ಪಡೆ ಮಾಡುವ ವಿಚಾರವಾಗಿ ಮುಖ್ಯಮಂತ್ರಿಗಳಿಂದ ಭರವಸೆ ಸಿಕ್ಕಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅವರ ನೇತೃತ್ವದ ನಿಯೋಗ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ವಿಧಾನಸೌಧದ ಮುಖ್ಯ ಮಂತ್ರಿಯವರ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿ ಮನವಿ ಸಲ್ಲಿಸಿದ್ದರು. ಸಚಿವ ಯು.ಟಿ. ಖಾದರ್, ಮುಖ್ಯಮಂತ್ರಿಗಳ ಜತೆ ಈ ಮಾತುಕತೆಯನ್ನು ಆಯೋಜಿಸಿದ್ದರು.
ಈಗಾಗಲೇ ತುಳು ಪಠ್ಯವನ್ನು ಪ್ರೌಢ ಶಾಲೆಯಲ್ಲಿ, ಪದವಿ ಶಿಕ್ಷ ಣದಲ್ಲಿ ಮತ್ತು ಸ್ನಾತಕೋತ್ತರ ಪದವಿ ತರಗತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಆದರೆ ಪಿಯುಸಿ ತರಗತಿಯಲ್ಲಿ ಮಾತ್ರ ತುಳು ಪಠ್ಯ ಜಾರಿಗೆ ಬರಲು ಬಾಕಿ ಇದೆ ಎಂಬ ವಿಚಾರವನ್ನು ಮುಖ್ಯಮಂತ್ರಿಯವರಿಗೆ ತಿಳಿಸಿದರು.
ಮಾತ್ರವಲ್ಲ, ಮುಂದಿನ ಶೈಕ್ಷ ಣಿಕ ವರ್ಷ ಆರಂಭಕ್ಕೆ ಮುಂಚಿತವಾಗಿ ಪಿಯುಸಿ ತರಗತಿಗಳಿಗೆ ಕೂಡ ತುಳು ಪಠ್ಯವನ್ನು ಐಚ್ಛಿಕ ವಿಷಯವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ.
ಈ ವೇಳೆ ಮುಖ್ಯಮಂತ್ರಿಯವರು ಪಿಯುಸಿಯಲ್ಲಿ ತುಳು ಪಠ್ಯ ಜಾರಿಯ ಬಗ್ಗೆ ಶೀಘ್ರವಾಗಿ ನಿರ್ಧಾರಕ್ಕೆ ಬರಲಾಗುವುದೆಂದು ನಿಯೋಗಕ್ಕೆ ಭರವಸೆ ನೀಡಿದ್ದಾರೆ.