ನವದೆಹಲಿ, ಜೂ08(Daijiworld News/SS): ನರೇಂದ್ರ ಮೋದಿ ನೂತನ ಪ್ರಧಾನಿಯಾಗಿ ಅಧಿಕಾರಕ್ಕೆ ಏರಿದ ಬಳಿಕ ಮಾಲ್ದೀವ್ಸ್ ಹಾಗೂ ಶ್ರೀಲಂಕಾಕ್ಕೆ ಜೂ.8 ಹಾಗೂ 9ರಂದು ಭೇಟಿ ನೀಡಲಿದ್ದಾರೆ.
ಮಾಲ್ದಿವ್ಸ್ಗೆ ಭೇಟಿ ನೀಡಲಿರುವ ಮೋದಿ, ಅಲ್ಲಿನ ಸಂಸತ್ ಸದಸ್ಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಾಲ್ದಿವ್ಸ್ ಅಧ್ಯಕ್ಷರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಮಾಲ್ದಿವ್ಸ್ಗೆ ಭೇಟಿ ನೀಡಿದ್ದ ಮೋದಿ, ಅಲ್ಲಿನ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಾಲ್ದೀವ್ಸ್ನಲ್ಲಿ ಚೀನಾ ಪ್ರಭಾವ ಕುಗ್ಗಿಸುವುದು ಹಾಗೂ ಭಾರತದ ಐತಿಹಾಸಿಕ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವುದು ಮೋದಿ ಭೇಟಿಯ ಉದ್ದೇಶವಾಗಿದೆ. ಇತ್ತೀಚಿಗೆ ಉಗ್ರರ ದಾಳಿಯಿಂದ ಕಂಗೆಟ್ಟಿರುವ ಶ್ರೀಲಂಕಾಕ್ಕೆ ನೈತಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಜೂ.9ರಂದು ಸಾಂಕೇತಿಕ ಭೇಟಿ ನೀಡಲಿದ್ದಾರೆ.
2011ರ ಬಳಿಕ ದ್ವಿಪಕ್ಷೀಯ ಮಾತುಕತೆಗೆ ಮಾಲ್ದೀವ್ಸ್ಗೆ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ಭೇಟಿ ನೀಡುತ್ತಿದ್ದಾರೆ. 2011ರಲ್ಲಿ ಮನಮೋಹನ್ ಸಿಂಗ್ ಭೇಟಿ ನೀಡಿದ್ದರೆ, 2018ರಲ್ಲಿ ಮಾಲ್ದೀವ್ಸ್ ನೂತನ ಅಧ್ಯಕ್ಷರ ಪ್ರಮಾಣವಚನಕ್ಕೆ ಪ್ರಧಾನಿ ಮೋದಿ ಪ್ರಯಾಣ ಬೆಳೆಸಿದ್ದರು.
ಮೋದಿ 2014ರಲ್ಲಿ ಮೊದಲ ಬಾರಿ ಪ್ರಧಾನಿಯಾದ ಬಳಿಕ ಭೂತಾನ್ಗೆ ಮೊದಲ ಪ್ರವಾಸ ಕೈಗೊಂಡಿದ್ದರು.