ನವದೆಹಲಿ, ಜೂ08(Daijiworld News/SS): ಮುಂಗಾರು ಪ್ರವೇಶ ಹಿನ್ನೆಲೆಯಲ್ಲಿ, ಕೇರಳದಲ್ಲಿ ಜೂನ್ 10ರವರೆಗೂ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕೊಲ್ಲಂ, ಅಲಪ್ಪುಜಾ, ಎರ್ನಾಕುಳಂ, ತಿರುವನಂತಪುರಂನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಕೇರಳಕ್ಕೆ ಮುಂಗಾರು ಪ್ರವೇಶಿಸುವುದರಿಂದ ರಾಜ್ಯದಲ್ಲೂ ಭಾರೀ ಮಳೆಯಾಗಲಿದೆ. ಈಗಾಗಲೇ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರಿನಲ್ಲಿ ಮಳೆ ಆಗುತ್ತಿದೆ. ನಾಳೆ ಹಾಗೂ ನಾಡಿದ್ದು ಕೂಡ ಭಾರೀ ವರ್ಷಧಾರೆ ಮುಂದುವರಿಯಲಿದ್ದು, ದಕ್ಷಿಣ ಒಳನಾಡಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.
ಕೇರಳದ ತಿರುವನಂತಪುರ, ಕೊಲ್ಲಂ, ಅಳಪ್ಪುಝ ಮತ್ತು ಎರ್ನಾಕುಳಂ ಜಿಲ್ಲೆಗಳಿಗೆ ಸಂಬಂಧಿಸಿ ಆರೆಂಜ್ ಅಲರ್ಟ್ ಜಾರಿ ಮಾಡಲಾಗಿದೆ. ಜೂನ್ 10ರಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚಿಸಲಾಗಿದೆ. ಮಾತ್ರವಲ್ಲ, ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಲ್ಲಿನ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ಗಾಳಿಯ ಒತ್ತಡ ಕಡಿಮೆಯಿದೆ. ಇದರೊಂದಿಗೆ ಮುಂಗಾರು ಪ್ರವೇಶಿಸಲು ಅಗತ್ಯ ವಾತಾವರಣ ನಿರ್ಮಾಣವಾಗಿದೆ.
ಇತ್ತ ಕರ್ನಾಟಕದಲ್ಲಿ ಮುಂಗಾರು ಮಳೆ ಎಂಟ್ರಿಗೆ ಕೆಲ ದಿನಗಳಷ್ಟೇ ಬಾಕಿ ಇರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬರ ಪ್ರವಾಸ ಅಧ್ಯಯನಕ್ಕೆ ಇಂದು ಎರಡನೇ ದಿನ. ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಲಿಂಗಸುಗೂರಲ್ಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.