ತ್ರಿಶ್ಯೂರ್, ಜೂ 8 (Daijiworld News/MSP): ಕೇರಳದ ತ್ರಿಶ್ಯೂರ್ ನಲ್ಲಿರುವ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಪೂಜೆ ಸಲ್ಲಿಸಿ ತಾವರೆ ಹೂವುಗಳಲ್ಲಿ ತುಲಾಭಾರ ಸೇವೆ ಸಲ್ಲಿಸಿದರು.
ಕೊಚ್ಚಿ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬಂದಿಳಿದಿದ್ದ ಪ್ರಧಾನಿ ಮೋದಿಯನ್ನು ಔಪಚಾರಿಕವಾಗಿ ಕೇರಳ ರಾಜ್ಯಪಾಲ ಪಿ ಸತಾಸಿವಂ, ಕೇಂದ್ರದ ನಾಯಕರು ಮತ್ತು ಕೇರಳ ಸರ್ಕಾರದ ವತಿಯಿಂದ ಸ್ವಾಗತಿದ್ರು. ಇಂದು ಬೆಳಗ್ಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತೀವ್ರ ಭದ್ರತೆ ಒದಗಿಸಲಾಗಿತ್ತು.
ನಂತರ ದೇವಾಲಯದಲ್ಲಿ ತುಲಾಭಾರ ಸೇವೆಯಲ್ಲಿ ಪ್ರಧಾನಿ ಮೋದಿ ಭಾಗಿಯಾದರು. ಮೋದಿ ಅವರ ತುಲಾಭಾರ ಸೇವೆಗಾಗಿ 112 ಕೆ.ಜಿ ತಾವರೆ ಹೂವುಗಳನ್ನು ತಮಿಳುನಾಡಿನ ನಾಗರಕೊಯಿಲ್ ನಿಂದ ತರಿಸಲಾಗಿದೆ. ಈ ಸೇವೆಯನ್ನು 2008 ರಲ್ಲೂ ನರೇಂದ್ರ ಮೋದಿ ಮಾಡಿದ್ದರು.
ಗುರುವಾಯೂರು ದೇವಸ್ಥಾನದಲ್ಲಿ ಸುಮಾರು ಒಂದು ಗಂಟೆ ಕಾಲ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದ ಪ್ರಧಾನಿ ನಂತರ ಕೇರಳ ರಾಜ್ಯ ಬಿಜೆಪಿ ಸಮಿತಿ ಏರ್ಪಡಿಸಿರುವ ಅಭಿನಂದನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.