ತಿರುವನಂತಪುರ, ಜೂ08(Daijiworld News/SS): ಸಿಟ್ಟು ಮತ್ತು ದ್ವೇಷದಿಂದ ಭಾರತವನ್ನು ಪ್ರಧಾನಿ ನರೇಂದ್ರ ಮೋದಿ ಇಬ್ಭಾಗಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೂರಿದ್ದಾರೆ.
ಕಲ್ಪೆಟ್ಟದಲ್ಲಿ ರೋಡ್ ಶೋ ನಡೆಸಿದ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ರಾಷ್ಟ್ರಮಟ್ಟದಲ್ಲಿ ನಾವು ವಿಷದ ವಿರುದ್ಧ ಹೋರಾಟ ಮಾಡಬೇಕಿದೆ. ನರೇಂದ್ರ ಮೋದಿ ಅವರು ವಿಷವನ್ನು ಬಳಸುತ್ತಿದ್ದಾರೆ. ನಾನು ವಿಷ ಎಂಬ ಅತ್ಯಂತ ಕಟುವಾದ ಪದವನ್ನು ಬಳಸುತ್ತಿದ್ದೇನೆ. ಯಾಕಂದರೆ, ನರೇಂದ್ರ ಮೋದಿಯವರು ರಾಷ್ಟ್ರವನ್ನು ಇಬ್ಭಾಗಿಸಲು ದ್ವೇಷದ ವಿಷವನ್ನು ಬಳಸುತ್ತಿದ್ದಾರೆ. ಸಿಟ್ಟು ಮತ್ತು ದ್ವೇಷದಿಂದ ಭಾರತವನ್ನು ಅವರು ಇಬ್ಭಾಗಿಸುತ್ತಿದ್ದಾರೆ. ಅವರು ಸುಳ್ಳನ್ನು ಹೇಳಿಯೇ ಚುನಾವಣೆ ಗೆಲ್ಲುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಯನಾಡಿನ ಜನತೆಗೆ ಕಾಂಗ್ರೆಸ್ ಬಾಗಿಲು ಸದಾಕಾಲ ತೆರೆದಿರುತ್ತದೆ. ನೀವು ಯಾರೇ ಆಗಿರಿ, ಎಲ್ಲಿಂದಲೇ ಬಂದಿರಿ, ನಿಮ್ಮ ವಯಸ್ಸು ಎಷ್ಟೇ ಇರಲಿ, ನಿಮ್ಮ ಸಿದ್ಧಾಂತ ಯಾವುದೇ ಇರಲಿ ನಿಮಗೆ ಕಾಂಗ್ರೆಸ್ ಬಾಗಿಲು ತೆರೆದಿರುತ್ತದೆ, ನೀವು ಪಕ್ಷವನ್ನು ಸೇರಬಹುದು ಎಂದು ತಿಳಿಸಿದರು.
ನರೇಂದ್ರ ಮೋದಿಯವರು ದೇಶದ ಕೆಟ್ಟ ಭಾವನೆಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ದ್ವೇಷ, ಸಿಟ್ಟು, ಅಸೂಯೆ, ಅಭದ್ರತೆ ಮತ್ತು ಸುಳ್ಳುಗಳನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಕಿಡಿಕಾರಿದರು.